Freedom TV

ಅಧಿಕಾರಿಗಳ ಶಾಮೀಲು;ಮರಳು ಲೂಟಿ- ಆರಗ ಜ್ಞಾನೇಂದ್ರ ವ್ಯಗ್ರ!

Former Home minister Aaraga Gnenendra criticises sand mafia and Hijab imposement in schools

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಧಿಕಾರಿಗಳೇ ಮುಂದೆ ನಿಂತು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ದ್ವಂದ್ವ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೋಟಿ ಬೆಲೆ ಮರಳು ಲೂಟಿ!


ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಕುರಿತು ಮಾತನಾಡಿದ ಶಾಸಕರು, “ತೀರ್ಥಹಳ್ಳಿಯ ವಿವಿಧ ಇಲಾಖೆಯ ಅಧಿಕಾರಿಗಳೇ ಮುಂದೆ ನಿಂತು ಅಕ್ರಮ ಮರಳು ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಈ ಅಕ್ರಮ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಮರಳು ಲೂಟಿಯಾಗುತ್ತಿದ್ದು, ನಾನೇ ಸ್ವತಃ ಸ್ಥಳಕ್ಕೆ ಹೋಗಿ ಪ್ರತಿಭಟನೆ ಮಾಡಿದ್ದೇನೆ. ಶಾಸಕನಾಗಿ ನಾನು ಹೋರಾಟ ಮಾಡಿದ ಬಳಿಕವೂ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಯಾರ ಕೃಪಕಟಾಕ್ಷದಿಂದ ಈ ದಂಧೆ ನಡೆಯುತ್ತಿದೆ. ಈ ದಂಧೆಯ ಹಿಂದಿರುವ ನಾಯಕರು ಯಾರು ಎಂದು ಹತಾಶೆಯೊಂದಿಗೆ ತೀವ್ರ ಆಕ್ರೋಶವನ್ನು ಹೊರಹಾಕಿದರು.

ಮತ ಬ್ಯಾಂಕ್ ರಾಜಕಾರಣ-ಹಿಜಾಬ್‌ಗೆ ಅವಕಾಶ
ರಾಜ್ಯ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ ಆರಗ ಜ್ಞಾನೇಂದ್ರ, “ಕಾಂಗ್ರೆಸ್ ಸರ್ಕಾರವು ಕೇವಲ ಮತಗಳಿಗಾಗಿ ವಿದ್ಯಾಮಂದಿರಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿ ಮುಸ್ಲಿಮರನ್ನು ಓಲೈಸುತ್ತಿದೆ. ಶಾಲೆಗಳಲ್ಲಿ ಹಿಜಾಬ್‌ಗೆ ಅನುಮತಿ ನೀಡಲಾಗಿದೆಯೇ ಹೊರತು ಕೇಸರಿ ಶಾಲಿಗೆ ಅವಕಾಶ ನೀಡಿಲ್ಲ. ಸರ್ಕಾರದ ಈ ದ್ವಂದ್ವ ನೀತಿಯು ವಿದ್ಯಾರ್ಥಿಗಳಲ್ಲಿ ಕೋಮುಭಾವನೆ ಕೆರಳುವಂತೆ ಮಾಡಿದೆ” ಎಂದು ಕಿಡಿಕಾರಿದರು.”ಬಿಜೆಪಿ ಸರ್ಕಾರವಿದ್ದಾಗ ಶಾಲೆಗಳಲ್ಲಿ ಸಮಾನತೆಗಾಗಿ ಹಿಜಾಬ್ ನಿಷೇಧಿಸಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರ ಮುಸ್ಲಿಂ ಮತಗಳ ಓಲೈಕೆಯಲ್ಲಿ ನಿರತವಾಗಿದೆ. ಅಲ್ಪಸಂಖ್ಯಾತರ ಕಾನೂನಿಗೋಸ್ಕರ 600 ಕೋಟಿ ರೂ. ಹಾಗೂ ಮುಸ್ಲಿಂ ಸಮುದಾಯದ ಶೈಕ್ಷಣಿಕ ಉದ್ದೇಶಕ್ಕಾಗಿ ಈ ಸಾಲಿನ ಬಜೆಟ್‌ನಲ್ಲಿ 1600 ಕೋಟಿ ರೂ. ಮೀಸಲಿಟ್ಟಿರುವುದು ಕೇವಲ ಮತ ಬ್ಯಾಂಕ್ ರಾಜಕಾರಣವಲ್ಲದೆ ಮತ್ತೇನು?” ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.


‘ಹಿಜಾಬ್ ಅವಕಾಶ ನಾಚಿಕೆಗೇಡಿನ ಸಂಗತಿ’
ಶಾಲೆಗಳಲ್ಲಿ ಸಮವಸ್ತ್ರ ನಿಯಮ ಇಟ್ಟಿರುವುದು ಸಮಾನತೆ ಹಾಗೂ ಜಾತ್ಯಾತೀತತೆಯ ಪರಿಪಾಲನೆಗಾಗಿ. ಪ್ರಪಂಚದ ಎಷ್ಟೋ ಮುಸ್ಲಿಂ ರಾಷ್ಟ್ರಗಳಲ್ಲೇ ಹಿಜಾಬ್ ನಿಷೇಧಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವುದು ನಾಚಿಕೆಗೇಡಿನ ಸಂಗತಿ ಎಂದ ಅವರು, ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ಮಾಡಿದ ಅನ್ಯಾಯದ ವಿರುದ್ಧ ಮುಸ್ಲಿಂ ಧರ್ಮಗುರುಗಳೆಲ್ಲಾ ಸೇರಿ ಬೃಹತ್ ಸಮಾವೇಶ ಆಯೋಜಿಸುತ್ತಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಅಲ್ಪಸಂಖ್ಯಾತರ ಮತಗಳು ಎಲ್ಲಿ ಚದುರುಹೋಗುತ್ತವೆಯೋ ಎಂಬ ಆತಂಕ ಸೃಷ್ಟಿಯಾಗಿದೆ. ದೈನಂದಿನ ರಾಜಕೀಯ ಬೆಳವಣಿಗೆಯಲ್ಲಿ ಈ ಕಾಂಗ್ರೆಸ್ ಸರ್ಕಾರ ದಿನೇ ದಿನೇ ರಾಜ್ಯದಲ್ಲಿ ಹೊಸ ಅನಾಹುತಗಳನ್ನು ಸೃಷ್ಟಿಸುತ್ತಿದೆ ಎಂದು ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

#AragaJnanendra #Shivamogga #Thirthahalli #SandMafia #HijabRow #KarnatakaPolitics #CongressGovernment #CorruptionAllegation #FreedomTV #FreedomTVNews #KannadaNews

Comments (0)

Your email address will not be published. Required fields are marked *

Back to top button