Freedom TV

ಜೂನ್ 18ಕ್ಕೆ ಮೇಲ್ಮನೆಯ 24 ಸ್ಥಾನಗಳಿಗೆ ಚುನಾವಣೆ!

June 18 Upper house election fixed

ನವದೆಹಲಿ/ಬೆಂಗಳೂರು: ಭಾರತೀಯ ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟಿಸಿದೆ. 10 ರಾಜ್ಯಗಳಲ್ಲಿ ತೆರವಾಗಲಿರುವ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಯಲಿದೆ.ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೂ ಇದೇ ದಿನ ಚುನಾವಣೆ ನಡೆಯಲಿದ್ದು, ಈ ಸುದ್ದಿ ಸ್ಯಾಂಡಲ್‌ವುಡ್ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಜೂನ್ 21 ರಿಂದ ಜುಲೈ 19ರ ಅವಧಿಯಲ್ಲಿ ವಿವಿಧ ರಾಜ್ಯಗಳ ಹಾಲಿ ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಶಾಸಕರ ಮತದಾನದ ಮೂಲಕ ಹೊಸ ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲಾಗುವುದು.

ಒಟ್ಟು 24 ಸ್ಥಾನಗಳಿಗೆ ಜಿದ್ದಾಜಿದ್ದಿ!


ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಆಂಧ್ರಪ್ರದೇಶ, ಗುಜರಾತ್ ಹಾಗೂ ಕರ್ನಾಟಕದ ತಲಾ 4 ಸ್ಥಾನಗಳು ಖಾಲಿಯಾಗುತ್ತಿವೆ. ಇವುಗಳ ಜೊತೆಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದ ತಲಾ 3 ಸ್ಥಾನ, ಜಾರ್ಖಂಡ್‌ನ 2 ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ತಲಾ 1 ಸ್ಥಾನಗಳಿಗೆ ಮತದಾನ ನಡೆಯಲಿದೆ. ಜಾರ್ಖಂಡ್‌ನಲ್ಲಿ ದಿವಂಗತ ಶಿಬು ಸೊರೆನ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೂ ಇದೇ ವೇಳೆ ಉಪಚುನಾವಣೆ ನಡೆಯಲಿರುವುದು ವಿಶೇಷ.

ದೇವೇಗೌಡ, ಖರ್ಗೆ ಯುಗ ಅಂತ್ಯ-ಹೊಸಮುಖಗಳಿಗೆ ಮಣೆ!
ಕರ್ನಾಟಕ ಹಾಗೂರಾಷ್ಟ್ರ ರಾಜಕಾರಣದ ಧುರೀಣ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಧ್ಯಪ್ರದೇಶದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಸೇರಿದಂತೆ ಹಲವು ಪ್ರಮುಖರ ರಾಜ್ಯಸಭಾ ಸದಸ್ಯತ್ವದ ಅವಧಿ ಮುಕ್ತಾಯಗೊಳ್ಳುತ್ತಿದೆ. ಇವರೊಂದಿಗೆ ಕರ್ನಾಟಕದ ಈರಣ್ಣ ಕಡಾಡಿ, ಆಂಧ್ರಪ್ರದೇಶದ ಅಯೋಧ್ಯಾ ರಾಮಿ ರೆಡ್ಡಿ ಅಲ್ಲಾ, ಪಿಲ್ಲಿ ಸುಭಾಶ್ಚಂದ್ರ ಬೋಸ್, ಕೇಂದ್ರ ಸಚಿವ ಜಾರ್ಜ್ ಕುರಿಯನ್ ಸೇರಿದಂತೆ ಹಲವು ರಾಜ್ಯಸಭಾ ಸದಸ್ಯರು ನಿವೃತ್ತಿ ಹೊಂದುತ್ತಿದ್ದಾರೆ. ಹೀಗಾಗಿ ಈ ಬಾರಿ ಕರ್ನಾಟಕದಿಂದ ಅದೃಷ್ಟಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬ ಚರ್ಚೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಾಳಯದಲ್ಲಿ ನಡೆಯುತ್ತಿದೆ.

2026ರ ರಾಜ್ಯಸಭಾ ಚುನಾವಣೆ ವೇಳಾಪಟ್ಟಿ

ಚುನಾವಣಾ ಪ್ರಕ್ರಿಯೆಪ್ರಮುಖ ದಿನಾಂಕ ಮತ್ತು ಸಮಯ
ಚುನಾವಣಾ ಅಧಿಸೂಚನೆ ಪ್ರಕಟಜೂನ್ 1
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಜೂನ್ 8
ನಾಮಪತ್ರಗಳ ಪರಿಶೀಲನೆಜೂನ್ 9
ನಾಮಪತ್ರ ಹಿಂಪಡೆಯಲು ಕಡೆಯ ದಿನಜೂನ್ 11
ಮತದಾನದ ದಿನಾಂಕ ಮತ್ತು ಸಮಯಜೂನ್ 18 (ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ)
ಮತ ಎಣಿಕೆ ಮತ್ತು ಫಲಿತಾಂಶಜೂನ್ 18 (ಸಂಜೆ 5:00 ಗಂಟೆಯ ನಂತರ)
ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಜೂನ್ 20

ನೇರಳೆ ಸ್ಕೆಚ್ ಪೆನ್ ಕಡ್ಡಾಯ!
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಚುನಾವಣಾ ಆಯೋಗ ಕಠಿಣ ನಿಯಮ ಜಾರಿಗೆ ತಂದಿದೆ. ಮತಪತ್ರದಲ್ಲಿ ತಮ್ಮ ಆದ್ಯತೆಗಳನ್ನು ಗುರುತಿಸಲು ಚುನಾವಣಾಧಿಕಾರಿಗಳು ಒದಗಿಸುವ ಪೂರ್ವ ನಿಗದಿತ ‘ನೇರಳೆ ಬಣ್ಣದ ಸಂಯೋಜಿತ ಸ್ಕೆಚ್ ಪೆನ್ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಬೇರೆ ಬಣ್ಣದ ಪೆನ್‌ಗಳನ್ನು ಬಳಸುವಂತಿಲ್ಲ, ಬಳಸಿದರೆ ಅಂತಹ ಮತಗಳು ತಕ್ಷಣ ಅಸಿಂಧುವಾಗಲಿವೆ. ಇಡೀ ಪ್ರಕ್ರಿಯೆಯ ಮೇಲೆ ನಿಗಾ ಇಡಲು ವಿಶೇಷ ವೀಕ್ಷಕರನ್ನು ನೇಮಕ ಮಾಡಲಾಗುತ್ತಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.ಚುನಾವಣೆಯ ಕಾವು ಏರುತ್ತಿದ್ದಂತೆಯೇ ಮೂರು ಪ್ರಮುಖ ಪಕ್ಷಗಳ ನಡುವೆ ಆಂತರಿಕ ಸಭೆಗಳು ಚುರುಕಾಗಿದ್ದು, ಶಾಸಕರ ಬಲಾಬಲದ ಆಧಾರದ ಮೇಲೆ ಸೀಟುಗಳನ್ನು ಹಂಚಿಕೊಳ್ಳಲು ತೆರೆಮರೆಯ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ.

#RajyaSabhaElection #ECI #KarnatakaPolitics #MallikarjunKharge #HDDevegowda #VidhanaSoudha #NewDelhi #RajyaSabhaPolls #FreedomTV

Comments (0)

Your email address will not be published. Required fields are marked *

Back to top button