ಅಬ್ಬಯ್ಯ VS ಸಲೀಂ- ಧಾರವಾಡಕ್ಕೆ 2ನೇ ಮಿನಿಸ್ಟರ್ ಭಾಗ್ಯ!
Ministership fight between Prasad Abbaiah vs Salim Ahmed

ಧಾರವಾಡ/ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ರಾಜಕಾರಣದ ಹೈವೋಲ್ಟೇಜ್ ಸಭೆಗಳು ದೆಹಲಿಯಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಸಂಪುಟ ಪುನರ್ರಚನೆಯ ಕಸರತ್ತು ಗರಿಗೆದರಿದೆ. ಇದರ ನಡುವೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಯಾದ ಧಾರವಾಡಕ್ಕೆ ಈ ಬಾರಿ ಎರಡನೇ ಸಚಿವ ಸ್ಥಾನ ಸಿಗುತ್ತಾ? ಎಂಬ ಕುತೂಹಲಕಾರಿ ಚರ್ಚೆ ಮುನ್ನಲೆಗೆ ಬಂದಿದೆ. ಸದ್ಯ ಜಿಲ್ಲೆಯಿಂದ ಸಂತೋಷ್ ಲಾಡ್ ಮಾತ್ರ ಸಚಿವರಾಗಿದ್ದು, ಎರಡನೇ ಸ್ಥಾನಕ್ಕಾಗಿ ಹುಬ್ಬಳ್ಳಿ-ಧಾರವಾಡದ ಇಬ್ಬರು ಪ್ರಭಾವಿ ನಾಯಕರ ನಡುವೆ ತೆರೆಮರೆಯ ಭಾರಿ ಪೈಪೋಟಿ ಆರಂಭವಾಗಿದೆ.

ಮರುಕಳಿಸಲಿದೆ 2013ರ ಇತಿಹಾಸ!
ಹಿಂದೆ 2013ರ ಸಿದ್ದರಾಮಯ್ಯನವರ ಮೊದಲ ಅವಧಿಯ ಸರ್ಕಾರದಲ್ಲಿ ಧಾರವಾಡ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಅಂದು ಹಾಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಧಾರವಾಡ ಗ್ರಾಮೀಣದ ಅಂದಿನ ಶಾಸಕ ವಿನಯ್ ಕುಲಕರ್ಣಿ ಇಬ್ಬರೂ ಸಚಿವರಾಗಿದ್ದರು. ಅದೇ ಮಾದರಿಯಲ್ಲಿ ಈ ಬಾರಿಯೂ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡ ಹೈಕಮಾಂಡ್ ಮೇಲೆ ಹೆಚ್ಚಾಗಿದೆ. ಪ್ರಸಾದ್ ಅಬ್ಬಯ್ಯ ಹುಬ್ಬಳ್ಳಿ ಪೂರ್ವ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದು ತಮಗೆ ಸಚಿವ ಸ್ಥಾನ ಸಿಗಬೇಕು ಎಂದು ಮಾಧ್ಯಮಗಳ ಮುಂದೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೊಂದಿಗೂ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾರೆ. ಕ್ಷೇತ್ರದಲ್ಲಿ ಸಕ್ರಿಯರಾಗಿದ್ದುಕೊಂಡು ಎಸ್‌ಸಿ (SC) ಕೋಟಾದ ಅಡಿಯಲ್ಲಿ ಸಂಪುಟ ಸೇರಲು ತೆರೆಮರೆಯ ಕಾರ್ಯತಂತ್ರ ಹೂಡಿದ್ದಾರೆ. ಒಂದು ವೇಳೆ ಹೈಕಮಾಂಡ್ ಹಾಲಿ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಟ್ಟರೆ, ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ.
ದೆಹಲಿವರೆಗೂ ಸಲೀಂ ಅಹ್ಮದ್ ಲಿಂಕ್!
ಸಲೀಂ ಅಹ್ಮದ್ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದು, ದೆಹಲಿಯ ಹೈಕಮಾಂಡ್ ನಾಯಕರೊಂದಿಗೆ ನೇರ ಮತ್ತು ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ.: ಇತ್ತೀಚೆಗೆ ನಡೆದ ದಾವಣಗೆರೆ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದಾರೆ. ಸದ್ಯ ಅಲ್ಪಸಂಖ್ಯಾತ (Minority) ಕೋಟಾದಡಿ ಸಚಿವ ಸ್ಥಾನ ಪಡೆಯಲು ಹೈಕಮಾಂಡ್ ಮಟ್ಟದಲ್ಲಿ ಭಾರಿ ಪೈಪೋಟಿ ನಡೆಸುತ್ತಿದ್ದಾರೆ.
ಮಾಜಿ ಆಗ್ತಾರಾ ಸಂತೋಷ್ ಲಾಡ್!
ಇನ್ನೊಂದೆಡೆ, ಧಾರವಾಡ ಜಿಲ್ಲೆಯ ಹಾಲಿ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಡುವ ಮಾತಿಲ್ಲ ಎಂಬ ಚರ್ಚೆಯೂ ಜೋರಾಗಿದೆ. ಲಾಡ್ ಅವರು ಇತ್ತೀಚಿನ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಹಾಗೂ ದೆಹಲಿ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಂಡಿದ್ದಾರೆ. ಹೀಗಾಗಿ ಲಾಡ್ ಅವರನ್ನು ಉಳಿಸಿಕೊಂಡೇ ಜಿಲ್ಲೆಗೆ 2013ರ ಮಾದರಿಯಲ್ಲಿ ಮತ್ತೊಂದು ಹೆಚ್ಚುವರಿ ಸಚಿವ ಸ್ಥಾನ ನೀಡಲಾಗುತ್ತದೆಯೇ? ಅಥವಾ ಕೈಬಿಟ್ಟು ಹೊಸ ಮುಖಕ್ಕೆ ಮಣೆ ಹಾಕಲಾಗುತ್ತದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ದೆಹಲಿಯಲ್ಲಿ ಇಂದು ನಡೆಯುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಹೈವೋಲ್ಟೇಜ್ ಸಭೆಯಲ್ಲಿ “ಅದಕ್ಷ ಸಚಿವರಿಗೆ ಗೇಟ್ ಪಾಸ್” ನೀಡುವ ಚರ್ಚೆ ನಡೆಯುತ್ತಿದೆ. ಹೀಗಾಗಿ 2028ರ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಹೈಕಮಾಂಡ್ ಯಾವ ದಾಳ ಉರುಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
#FreedomTV #DharwadPolitics #PrasadAbbayya #SalimAhmed #SantoshLad #KarnatakaCabinetExpansion #CongressHighCommand #Siddaramaiah #DKShivakumar #HubliDharwad #CabinetReshuffle #KarnatakaNews #BreakingNews #PoliticalUpdates




