ನಾಳೆ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್, ಕೆಲವು ಸಚಿವರ ಹೆಸರು ಇಂದು ಬಹುತೇಕ ಖಚಿತ!
DKS CM oath ceremony tomorrow 12 ministers may include in this

ಬೆಂಗಳೂರು/ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಬುಧವಾರ ಸಂಜೆ 4:05ಕ್ಕೆ ಲೋಕಭವನದ ಗ್ಲಾಸ್ ಹೌಸ್ನಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ನೂತನ ಸಿಎಂ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ 10 ರಿಂದ 12 ಮಂದಿ ಹಿರಿಯ ಶಾಸಕರ ಅಂತಿಮ ಪಟ್ಟಿ ಇಂದು (ಮಂಗಳವಾರ) ಪ್ರಕಟವಾಗುವ ಸಾಧ್ಯತೆಯಿದೆ.
ಸಚಿವ ಸಂಪುಟ ಕಸರತ್ತಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹಂಗಾಮಿ ಸಿಎಂ ಸಿದ್ದರಾಮಯ್ಯ ಮತ್ತು ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಜೊತೆಗೂಡಿ ಅಂತಿಮ ಪಟ್ಟಿಗೆ ಮುದ್ರೆ ಒತ್ತಲಿದ್ದಾರೆ.

ಮಂತ್ರಿಗಿರಿಗೆ ದ್ವಿಬಣಗಳಿಂದ ಭಾರಿ ಲಾಬಿ!
ಕಾಂಗ್ರೆಸ್ ಮೂಲಗಳ ಪ್ರಕಾರ, ಸಚಿವ ಸಂಪುಟ ರಚನೆಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ಗೆ ಪ್ರತ್ಯೇಕ ಪಟ್ಟಿಗಳನ್ನು ಸಜೆಸ್ಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಲಿಸ್ಟ್: ಇವರು ಸಲ್ಲಿಸಿರುವ 12 ಜನರ ಪಟ್ಟಿಯಿಂದ 10 ಮಂದಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಇದೆ.
ಡಿ.ಕೆ. ಶಿವಕುಮಾರ್ ಲಿಸ್ಟ್: ಇವರು ಸಲ್ಲಿಸಿರುವ 15 ಜನರ ಪಟ್ಟಿಯಿಂದ 12 ಮಂದಿಯನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಉಳಿದ ಖಾಲಿ ಸ್ಥಾನಗಳನ್ನು ಜೂನ್ 18ರಂದು ನಡೆಯಲಿರುವ ನಾಲ್ಕು ರಾಜ್ಯಸಭೆ ಹಾಗೂ ಏಳು ವಿಧಾನ ಪರಿಷತ್ ಸ್ಥಾನಗಳ ಚುನಾವಣೆಯ ನಂತರ ಭರ್ತಿ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ ಎನಲ್ಲಾಗಿದೆ.
ರೇಸ್ನಲ್ಲಿರುವ ಪ್ರಮುಖ ನಾಯಕರು!
ಹೊಸ ಸಚಿವ ಸಂಪುಟದಲ್ಲಿ ಅನುಭವಿ ನಾಯಕರು ಹಾಗೂ ಹೊಸ ಮುಖಗಳ ಮಿಶ್ರಣ ಇರಲಿದ್ದು, ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಭಾರಿ ಆದ್ಯತೆ ನೀಡಲಾಗುತ್ತಿದೆ. ಪ್ರಮುಖವಾಗಿ ಯತೀಂದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್ ಮತ್ತು ಜಮೀರ್ ಅಹಮದ್ ಖಾನ್ ಅವರ ಹೆಸರುಗಳು ಸಚಿವ ಸ್ಥಾನದ ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನಾವು ಕುಳಿತು ಅಂತಿಮ ತೀರ್ಮಾನ ಮಾಡಬೇಕಿದೆ” ಎಂದಷ್ಟೇ ಹೇಳಿದ್ದಾರೆ.
ಮತ್ತೆ ಸಚಿವೆಯಾಗುವ ವಿಶ್ವಾಸದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್
ಕಳೆದ ಸಿದ್ದರಾಮಯ್ಯ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ದೆಹಲಿಗೆ ಆಗಮಿಸಿದ್ದು, ತಮಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗುವ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.”ನನಗೆ ಮೊದಲ ಬಾರಿಗೆ ಸಚಿವ ಸ್ಥಾನ ನೀಡಿದಾಗ ಮೂರು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಕಾರ್ಯಕ್ಷಮತೆಯ ಆಧಾರದ ಮೇಲೆ ಹೈಕಮಾಂಡ್ ಮತ್ತೊಮ್ಮೆ ಜವಾಬ್ದಾರಿ ನೀಡಲಿದೆ ಎಂಬ ನಂಬಿಕೆ ನನಗಿದೆ” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸಚಿವರ ಪಟ್ಟಿ ಫೈನಲ್ ಮಾಡಲು ಸೋಮವಾರ ಬೆಳಿಗ್ಗೆಯೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಸಿ. ಮಹದೇವಪ್ಪ ಹಾಗೂ ಕೆ.ಜೆ. ಜಾರ್ಜ್ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಿದ್ದಾರೆ. ಸದ್ಯ ಹೈಕಮಾಂಡ್ ನಾಯಕರ ಭೇಟಿ ಬೆನ್ನಲ್ಲೇ ಸಚಿವ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಾಗಿದ್ದು, ಇಂದು ಸಂಜೆಯೊಳಗೆ ಅಂತಿಮವಾಗಿ ಅದೃಷ್ಟವಂತರ ಲಿಸ್ಟ್ ಕೈಸೇರಲಿದೆ.
#DKShivakumar #Siddaramaiah #KarnatakaCabinet #CabinetExpansion #CongressHighCommand #RahulGandhi #MallikarjunKharge #KarnatakaPolitics #SwearingInCeremony #LaxmiHebbalkar #FreedomTVKannada #BreakingNews #DelhiPolitics




