ಮೈಸೂರಿನ ಚಾಮುಂಡಿಬೆಟ್ಟಕ್ಕೆ ದರ್ಶನ್ ಪತ್ನಿ ಭೇಟಿ – ವಿಶೇಷ ಪೂಜೆ ಸಲ್ಲಿಕೆ!
Darshan's wife visits Chamundi Hill in Mysuru

ಮೈಸೂರು : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇಂದು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಆಷಾಢ ಮಾಸದ ಮೊದಲ ಶುಕ್ರವಾರದ ಅತ್ಯಂತ ಪವಿತ್ರ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಬೆಟ್ಟಕ್ಕೆ ಭೇಟಿ ನೀಡಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿವರ್ಷ ಆಷಾಢ ಮಾಸದ ಶುಕ್ರವಾರದಂದು ನಟ ದರ್ಶನ್ ತಮ್ಮ ಇಡೀ ಕುಟುಂಬದೊಂದಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ, ಸದ್ಯ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಈ ಬಾರಿ ಒಂಟಿಯಾಗಿಯೇ ಬೆಟ್ಟಕ್ಕೆ ಆಗಮಿಸಿದ್ದಾರೆ.
ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ವಿಜಯಲಕ್ಷ್ಮಿ ಪತಿ ದರ್ಶನ್, ಮಗ ವಿನೇಶ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ ಮನೆಮಾಡಿದೆ. ಇಡೀ ಬೆಟ್ಟವನ್ನು ವಿಶೇಷ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನಡೆಯುತ್ತಿದೆ. ದೇವಿಯ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ.




