ರಾಜ್ಯ ಸರ್ಕಾರಕ್ಕೆ ಸುಪ್ರೀಂ ಬಿಗ್ ಶಾಕ್ – 360+ KAS ಅಧಿಕಾರಿಗಳು ಮನೆಗೆ!
Big shock from the Supreme Court to the State Government – over 360 KAS officers sent home!

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 2011ರ KAS ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮತ್ತು ನೇಮಕಗೊಂಡ ಅಧಿಕಾರಿಗಳಿಗೆ ಭಾರೀ ಆಘಾತ ಉಂಟುಮಾಡಿದೆ.
2011ನೇ ಸಾಲಿನ ಕೆಎಎಸ್ ನೇಮಕಾತಿ ಪಟ್ಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವ ಕೋರ್ಟ್, ಸರ್ಕಾರ ಈ ನೇಮಕಾತಿಗಳನ್ನು ರಕ್ಷಿಸಲು 2022ರಲ್ಲಿ ತಂದಿದ್ದ ವಿಶೇಷ ಕಾಯ್ದೆಯನ್ನು ಎತ್ತಿಹಿಡಿಯಲು ನಿರಾಕರಿಸಿದೆ ಹಾಗೂ ಅದನ್ನು ರದ್ದುಗೊಳಿಸಿದೆ. ಈ ತೀರ್ಪಿನಿಂದಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 360ಕ್ಕೂ ಅಧಿಕ ಕೆಎಎಸ್ ಅಧಿಕಾರಿಗಳ (ಎಸಿ, ತಹಶೀಲ್ದಾರ್, ಡಿವೈಎಸ್ಪಿ) ಉದ್ಯೋಗದ ಮೇಲೆ ನೇರ ಕತ್ತರಿ ಬಿದ್ದಂತಾಗಿದೆ.
ಕಳೆದ 10 ವರ್ಷಗಳಿಗೂ ಅಧಿಕ ಕಾಲದಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ಸುಪ್ರೀಂ ಕೋರ್ಟ್ನಿಂದ ಅಂತಿಮ ತೀರ್ಪು ಬಂದಿದೆ. ಜಸ್ಟೀಸ್ ಜೆ.ಬಿ. ಪಾರ್ದಿವಾಲಾ ಮತ್ತು ಜಸ್ಟೀಸ್ ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಈ ಹಿಂದೆ ಸರ್ಕಾರದ ಪರವಾಗಿ ನೀಡಲಾಗಿದ್ದ ಕರ್ನಾಟಕ ಹೈಕೋರ್ಟ್ನ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಶ್ರೀನಿವಾಸ ಟಿ. ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಅರ್ಜಿದಾರರ ವಾದಕ್ಕೆ ಮನ್ನಣೆ ನೀಡಿದೆ.
2011ರ ಕೆಎಎಸ್ ನೇಮಕಾತಿ ಸಂದರ್ಭದಲ್ಲಿ ಸಂದರ್ಶನ ಮತ್ತು ಅಂಕ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದೀರ್ಘಕಾಲ ಹೋರಾಟ ನಡೆಯಿತು.
ನ್ಯಾಯಾಲಯದಲ್ಲಿ ಮುಖಭಂಗವಾಗುವುದನ್ನು ತಪ್ಪಿಸಲು ಮತ್ತು ನೇಮಕಗೊಂಡ ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ, ರಾಜ್ಯ ಸರ್ಕಾರವು 2022ರಲ್ಲಿ ಒಂದು ವಿಶೇಷ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಸರ್ಕಾರದ ಈ ತಂತ್ರವು ಸುಪ್ರೀಂ ಕೋರ್ಟ್ನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ವಿಶೇಷ ಕಾಯ್ದೆಯನ್ನು ಕೋರ್ಟ್ ರದ್ದುಗೊಳಿಸಿದೆ.
ಇದರಿಂದ ಎಸಿ, ತಹಶೀಲ್ದಾರ್, ಡಿವೈಎಸ್ಪಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 362ಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳ ನೌಕರಿಗೆ ಈಗ ಆಪಘಾತ ಎದುರಾಗಿದೆ.




