ರಾಜ್ಯ

ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ವೇಳೆ ಮಹಾ ದುರಂತ – ಕಾಲ್ತುಳಿತಕ್ಕೆ 19 ಮಂದಿ ಸಾವು!

Major tragedy during Durga Puja in Kolkata – 19 dead in a stampede!

ಕೋಲ್ಕತ್ತಾ : ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ವೇಳೆ ಮಹಾ ದುರಂತವೊಂದು ಸಂಭವಿಸಿದೆ. ಚೋರ್‌ಬಾಗನ್ ಸಾರ್ವಜನಿಕ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ ಸಂಜೆ ಜನದಟ್ಟಣೆಯಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಹಾ ಪೂಜೆಯ ಸಂಭ್ರಮದ ವೇಳೆ ದಿಢೀರ್ ಮಳೆ ಸುರಿದಿದ್ದು, ಈ ವೇಳೆ ಭಕ್ತರು ಏಕಾಏಕಿ ಒಂದೇ ಬಾರಿಗೆ ಪೆಂಡಾಲ್ ಒಳಗೆ ನುಗ್ಗಿದ್ದಾರೆ. ಈ ವೇಳೆ ಮುನ್ನುಗ್ಗುವ ಭರಾಟೆಯಲ್ಲಿ ತಳ್ಳಾಟ ಮತ್ತು ನೂಕಾಟ ಉಂಟಾಗಿದೆ.

ಜನರ ಭಾರೀ ನೂಕಾಟದಿಂದಾಗಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಪೆಂಡಾಲ್‌ನ ಒಂದು ಭಾಗ ಕುಸಿದು ಬಿದ್ದಿದೆ. ಪೆಂಡಾಲ್ ಕುಸಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಆತಂಕ, ಗೊಂದಲ ಹಾಗೂ ಭೀತಿಯ ವಾತಾವರಣ ನಿರ್ಮಾಣವಾಯಿತು. ತಳ್ಳಾಟದ ವೇಳೆ ಕೆಳಗೆ ಬಿದ್ದ ಅನೇಕ ಜನರ ಮೇಲೆ ಕಾಲ್ತುಳಿತ ಉಂಟಾಗಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ದುರಂತದಿಂದ ಸಾವನ್ನಪ್ಪಿರುವವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ ರೂ. 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರೂ. 50,000 ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights