ರಾಜಕೀಯರಾಜ್ಯವಾಣಿಜ್ಯಸುದ್ದಿ

ಮಾಜಿ ಸಚಿವ ಪ್ರಭು ಚೌಹಾಣ್‌ಗೆ ಸಂಕಷ್ಟ- ಸರ್ಕಾರಿ ಭೂ ಕಬಳಿಕೆ ಆರೋಪದಡಿ ವಿಶೇಷ ನ್ಯಾಯಾಲಯದಿಂದ ನೋಟಿಸ್ ಜಾರಿ!

ಬೀದರ್: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಭೂ ಕಬಳಿಕೆ ವಿವಾದ ಸದ್ದು ಮಾಡುತ್ತಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಭು ಚೌಹಾಣ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಪ್ರಭು ಚೌಹಾಣ್ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.


ಬೀದರ್ ತಾಲೂಕಿನ ಕೊಳ್ಳಾರ ಗ್ರಾಮದ ಸರ್ವೆ ನಂಬರ್ 102ರಲ್ಲಿರುವ ಸುಮಾರು 3 ಎಕರೆ ಸರ್ಕಾರಿ ಜಾಗವನ್ನು ಪ್ರಭು ಚೌಹಾಣ್ ಅವರು ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕಮಲನಗರ ತಾಲೂಕಿನ ಚೌಂದೋರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪಕ್ ಪಾಟೀಲ್ ಅವರು ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, 2027ರ ಜನವರಿ 19ರ ಒಳಗಾಗಿ ಈ ನೋಟಿಸ್‌ಗೆ ಸೂಕ್ತ ಉತ್ತರ ಹಾಗೂ ದಾಖಲೆಗಳೊಂದಿಗೆ ಪ್ರತಿಕ್ರಿಯೆ ನೀಡುವಂತೆ ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.


ದೂರುದಾರ ದೀಪಕ್ ಪಾಟೀಲ್ ಅವರು ಸಲ್ಲಿಸಿರುವ ದಾಖಲೆಗಳ ಪ್ರಕಾರ, ವಿವಾದಿತ 3 ಎಕರೆ ಜಮೀನು ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದ್ದಾಗಿದೆ. ಈ ಅಕ್ರಮ ಒತ್ತುವರಿಯ ಕುರಿತು ಈ ಹಿಂದೆಯೇ ಬೀದರ್ ಜಿಲ್ಲಾಧಿಕಾರಿಗಳಿಗೆ (DC) ಲಿಖಿತ ದೂರು ಸಲ್ಲಿಸಲಾಗಿತ್ತು. ಆದರೆ, ಜಿಲ್ಲಾಡಳಿತವು ಈ ದೂರನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿತ್ತು ಎನ್ನಲಾಗಿದೆ. ಸ್ಥಳೀಯ ಆಡಳಿತದಿಂದ ನ್ಯಾಯ ಸಿಗದ ಕಾರಣ, ದೀಪಕ್ ಪಾಟೀಲ್ ಅವರು ಅನಿವಾರ್ಯವಾಗಿ ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.

ಸದ್ಯ ನ್ಯಾಯಾಲಯದ ನೋಟಿಸ್ ಜಾರಿಯಾಗಿರುವುದು ಬೀದರ್ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮುಂದಿನ ವಿಚಾರಣೆಯಲ್ಲಿ ಶಾಸಕ ಪ್ರಭು ಚೌಹಾಣ್ ಅವರು ಯಾವ ರೀತಿಯ ಸ್ಪಷ್ಟನೆ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

Leave a Reply

Your email address will not be published. Required fields are marked *

Back to top button
Verified by MonsterInsights