ರಾಜ್ಯ

ಅರ್ನಬ್​ ಚಂಡಮಾರುತಕ್ಕೆ 8 ಮಂದಿ ಬಲಿ – ವಿಮಾನ, ರೈಲು ಸಂಚಾರ ಸ್ಥಗಿತ!

Cyclone Arnab claims 8 lives – flight and train services halted!

ಅಮರಾವತಿ : ಆಂಧ್ರಪ್ರದೇಶದಲ್ಲಿ ‘ಅರ್ನಬ್’ ಚಂಡಮಾರುತವು ರಕ್ಕಸ ರೂಪ ತಾಳಿದ್ದು, ತೀರ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಯ ಅಬ್ಬರ ಮುಂದುವರಿದಿದೆ. ಸೈಕ್ಲೋನ್ ಅಪ್ಪಳಿಸಿದ ಪರಿಣಾಮ ರಾಜ್ಯದಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಚಂಡಮಾರುತದ ಪ್ರಭಾವದಿಂದ ಕರಾವಳಿ ಭಾಗದಲ್ಲಿ ಸಮುದ್ರದ ಅಲೆಗಳು ದೈತ್ಯ ಗಾತ್ರದಲ್ಲಿ ಭೋರ್ಗರೆದು ತೀರ ಪ್ರದೇಶದೊಳಗೆ ನುಗ್ಗುತ್ತಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ. ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಮತ್ತು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಅರ್ನಬ್ ಚಂಡಮಾರುತದ ಅಬ್ಬರದಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದು, 10ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೂ ತೀವ್ರ ಅಡ್ಡಿಯಾಗಿದೆ. ಪ್ರಯಾಣಿಕರು ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ಹಾನಿಯ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದಾರೆ.

ಈ ಚಂಡಮಾರುತದ ಪ್ರಭಾವ ಕೇವಲ ಆಂಧ್ರಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಒಡಿಶಾ, ತೆಲಂಗಾಣ ಮತ್ತು ಗುಜರಾತ್‌ ರಾಜ್ಯಗಳಿಗೂ ತಟ್ಟಿದೆ. ಈ ರಾಜ್ಯಗಳ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುತ್ತಿದ್ದು, ಆಡಳಿತ ಯಂತ್ರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಅರ್ನಬ್ ಚಂಡಮಾರುತದ ಪ್ರಭಾವದಿಂದ ಕರ್ನಾಟಕದಲ್ಲೂ ಮುಂದಿನ ಕೆಲವು ದಿನಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Comments (0)

Your email address will not be published. Required fields are marked *

Back to top button
Verified by MonsterInsights