
ಬೆಂಗಳೂರು : ಉಪ್ಪು ಮತ್ತು ಸಕ್ಕರೆಯ ಅತಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದ ಬಳಿಕ, ಈಗ ಸರ್ಕಾರದ ಗಮನ ಅಡುಗೆ ಎಣ್ಣೆಯ ಮರುಬಳಕೆಯ ಮೇಲಕ್ಕೆ ತಿರುಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಮನೆಗಳಲ್ಲಿ ಒಂದೇ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಮರುಬಳಕೆ ಮಾಡುವುದರಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ.
ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸಿ ಬಳಸುವುದರಿಂದ ಉಂಟಾಗುವ ಆರೋಗ್ಯದ ಅಪಾಯಗಳನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ನಿಗಾ ವಹಿಸಲು ಮುಂದಾಗಿದೆ. ಈ ಹೊಸ ನಿಯಮಗಳು ಕೇವಲ ದೊಡ್ಡ ಹೋಟೆಲ್ಗಳಿಗೆ ಮಾತ್ರವಲ್ಲದೆ, ರೆಸ್ಟೋರೆಂಟ್ಗಳು, ಬೇಕರಿಗಳು ಮತ್ತು ಬೀದಿಬದಿಯ ತಿಂಡಿ ಗಾಡಿಗಳಿಗೂ ಅನ್ವಯಿಸಲಿವೆ.
ವಾಣಿಜ್ಯ ಸಂಸ್ಥೆಗಳು ತಾವು ಬಳಸುವ ಅಡುಗೆ ಎಣ್ಣೆಯ ಪ್ರಮಾಣ, ಅದರ ಬಳಕೆ ಮತ್ತು ವಿಲೇವಾರಿ ಬಗ್ಗೆ ನಿಖರವಾದ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯವಾಗಲಿದೆ. ಕೇವಲ ಹೋಟೆಲ್ಗಳಷ್ಟೇ ಅಲ್ಲದೆ, ಮನೆಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಮರುಬಳಕೆ ಮಾಡದಂತೆ ತಡೆಯಲು ವಿಶೇಷ ವ್ಯವಸ್ಥೆಯನ್ನು ರೂಪಿಸುವ ಚಿಂತನೆ ನಡೆದಿದೆ.
ಒಂದೇ ಎಣ್ಣೆಯನ್ನು ಪದೇ ಪದೇ ಹೆಚ್ಚು ತಾಪಮಾನದಲ್ಲಿ ಕಾಯಿಸುವುದರಿಂದ ಅದರಲ್ಲಿರುವ ಕೊಬ್ಬಿನಂಶವು ಬದಲಾಗಿ ಹಾನಿಕಾರಕ ಅಂಶಗಳು ಉತ್ಪತ್ತಿಯಾಗುತ್ತವೆ. ಸಾಮಾನ್ಯ ಗ್ರಾಹಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಈ ಹೊಸ ಹೆಜ್ಜೆಯು ಅತ್ಯಂತ ಮಹತ್ವದ್ದಾಗಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ನಿಯಮಗಳು ಜಾರಿಗೆ ಬರಲಿದೆ.




