ಜನಸಾಮಾನ್ಯರಿಗೆ ಮತ್ತೆ ಶಾಕ್ – 4 ತಿಂಗಳಲ್ಲಿ 4ನೇ ಬಾರಿ ಅಕ್ಕಿ ದರ ಏರಿಕೆ!
Another shock for the common man – rice prices hiked for the fourth time in four months!

ಬೆಂಗಳೂರು : ರಾಜ್ಯದ ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇದೀಗ ಜನರ ನಿತ್ಯದ ಬಳಕೆಯ ಅಕ್ಕಿ ಹಾಗೂ ತೊಗರಿ ಬೇಳೆ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ ನಾಲ್ಕನೇ ಬಾರಿಗೆ ಅಕ್ಕಿ ದರ ಹೆಚ್ಚಳವಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಸೋನಾ ಮಸೂರಿ ಅಕ್ಕಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದತ್ತ ಮುಖ ಮಾಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಸೋನಾ ಮಸೂರಿ ಅಕ್ಕಿ ಕೆಜಿಗೆ ಈಗ ₹88 ವರೆಗೆ ತಲುಪಿದೆ. ಒಟ್ಟು 25 ಕೆಜಿ ಸೋನಾ ಮಸೂರಿ ಅಕ್ಕಿ ಚೀಲದ ಮೇಲೆಯೇ ₹390 ರಿಂದ ₹400 ರಷ್ಟು ಏರಿಕೆಯಾಗಿದೆ.
ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಿಂದ ಮಾರುಕಟ್ಟೆಗೆ ಆಗಮಿಸುತ್ತಿರುವ ಅಕ್ಕಿಯ ಒಟ್ಟು ಆವಕದಲ್ಲಿ ಭಾರಿ ಇಳಿಕೆಯಾಗಿದೆ. ಮುಖ ಭತ್ತದ ಕಣಜಗಳಾದ ರಾಯಚೂರು, ಸಿಂಧನೂರು ಮತ್ತು ಸಿರಗುಪ್ಪ ಪ್ರದೇಶಗಳಲ್ಲಿ ತುಂಗಭದ್ರಾ ನದಿ ನೀರು ಸರಿಯಾಗಿ ಸಿಗದ ಹಿನ್ನೆಲೆಯಲ್ಲಿ ಭತ್ತದ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ಇಳುವರಿ ಕುಸಿದಿದೆ. ಮಾರುಕಟ್ಟೆಯಲ್ಲಿ ಒಟ್ಟಾರೆ ಭತ್ತ ಹಾಗೂ ಅಕ್ಕಿಯ ದಾಸ್ತಾನು ಗಣನೀಯವಾಗಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ನೇರ ಕಾರಣವಾಗಿದೆ.
ಅಕ್ಕಿ ಬೆಲೆ ಏರಿಕೆಯ ಬೆನ್ನಲ್ಲೇ ಬಡವರು ಹಾಗೂ ಮಧ್ಯಮ ವರ್ಗದವರ ಅಡುಗೆ ಮನೆಯ ಮುಖ್ಯ ಪದಾರ್ಥವಾದ ತೊಗರಿ ಬೇಳೆ ಬೆಲೆಯೂ ಮತ್ತಷ್ಟು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ತೊಗರಿ ಬೇಳೆ ಬೆಲೆ ಪ್ರಸ್ತುತ ₹150 ರ ಗಡಿ ದಾಟಿದೆ.




