ರಷ್ಯಾ ಕರಾವಳಿಯಲ್ಲಿ ಉಕ್ರೇನ್ ಡ್ರೋನ್ ದಾಳಿ – 23 ಭಾರತೀಯ ಸಿಬ್ಬಂದಿ ಪಾರು!
Ukrainian drone attack off Russian coast – 23 Indian crew members safe!

ಮಾಸ್ಕೋ : ರಷ್ಯಾದ ಕಪ್ಪು ಸಮುದ್ರ ಕರಾವಳಿಯ ಸೋಚಿ ನಗರದ ಸಮೀಪ, ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊಂದಿದ ತೈಲ ಟ್ಯಾಂಕರ್ ಮೇಲೆ ಉಕ್ರೇನ್ ನೌಕಾ ಡ್ರೋನ್ ಭೀಕರ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಹಡಗಿನಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಹಡಗಿನಲ್ಲಿದ್ದ 23 ಮಂದಿ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ದಾಳಿಯ ಬಳಿಕ ಸಮುದ್ರದ ಮಧ್ಯೆ ಹಡಗು ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದ್ದು, ದಟ್ಟ ಕಪ್ಪು ಹೊಗೆಯ ಮೋಡಗಳು ಆಕಾಶಕ್ಕೆ ಚಿಮ್ಮುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬೆಂಕಿಯ ತೀವ್ರತೆ ವಿಪರೀತವಾಗಿರುವ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ಸದ್ಯಕ್ಕೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ನೆಚ್ಚಿನ ಸೋಚಿ ನಗರದ ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ರೊಮೇನಿಯಾ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ ನಡೆದು ಅದು ಮುಳುಗಡೆಯಾಗಿತ್ತು. ಆ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಮತ್ತೊಬ್ಬರು ನಾಪತ್ತೆಯಾಗಿದ್ದು, ಓರ್ವ ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದರು. ಆ ದಾಳಿಯ ಹಿಂದೆ ರಷ್ಯಾ ಕೈವಾಡವಿದೆ ಎಂದು ಉಕ್ರೇನ್ ಗಂಭೀರವಾಗಿ ಆರೋಪಿಸಿತ್ತು.




