
ನವದೆಹಲಿ : SIR ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಹಾಗೂ ಮತದಾರರ ಹಕ್ಕುಗಳನ್ನು ರಕ್ಷಿಸುವಂತೆ ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಇಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟುಹಿಡಿದು ವಿಪಕ್ಷಗಳು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿವೆ.
ಸಂಸತ್ ಭವನದಿಂದ ಆರಂಭವಾದ ಬೃಹತ್ ಪ್ರತಿಭಟನಾ ರ್ಯಾಲಿಯು ನವದೆಹಲಿಯ ಅಶೋಕ ರಸ್ತೆಯಲ್ಲಿರುವ ನಿರ್ವಾಚನ್ ಸದನದ ಕಡೆಗೆ ಸಾಗಿತು. ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ಇಂಡಿಯಾ ಒಕ್ಕೂಟದ ನಾಯಕರು ಮತ್ತು ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಪೊಲೀಸರು ಮಾರ್ಗಮಧ್ಯೆ ತಡೆದು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಚುನಾವಣಾ ಆಯೋಗದ ಕಚೇರಿ ಮುತ್ತಿಗೆ ಯತ್ನದ ಸಂದರ್ಭದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಹಿರಿಯ ಮುಖಂಡರನ್ನು ದೆಹಲಿ ಪೊಲೀಸರು ರಸ್ತೆ ಮಧ್ಯೆಯೇ ವಶಕ್ಕೆ ಪಡೆದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಕಚೇರಿ ಸುತ್ತಲೂ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಪ್ರಮುಖ ಬೇಡಿಕೆಗಳೇನು?
- ಎಸ್ಐಆರ್ (SIR) ಪ್ರಕ್ರಿಯೆಯನ್ನು ಕೂಡಲೇ ಸಂಪೂರ್ಣವಾಗಿ ರದ್ದುಪಡಿಸಬೇಕು.
- ಮತದಾರರ ಹಕ್ಕುಗಳನ್ನು ಯಾವುದೇ ದೋಷವಿಲ್ಲದೆ ಕಾಯ್ದುಕೊಳ್ಳಬೇಕು.
- ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು.
ಈ ಪ್ರತಿಭಟನೆಯಲ್ಲಿ ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ಪ್ರಮುಖ ನಾಯಕರು, ಸಂಸತ್ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ದಿಲ್ಲಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.




