ಇಂದಿನಿಂದ ಕಾಂಗ್ರೆಸ್ ‘ಭಾರತ್ ಜೋಡೋ 2.0’ ಯಾತ್ರೆ ಆರಂಭ!
Congress’s ‘Bharat Jodo 2.0’ Yatra begins today!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಪಾದಯಾತ್ರೆಗಳ ಹವಾ ಜೋರಾಗಿದೆ. ಇಂದಿನಿಂದ ಕಾಂಗ್ರೆಸ್ ಪಕ್ಷವು ಮಹತ್ತ್ವಾಕಾಂಕ್ಷೆಯ ‘ಭಾರತ್ ಜೋಡೋ 2.0’ ಯಾತ್ರೆ ನಡೆಯಲಿದೆ. ವಿಶೇಷವೆಂದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸ್ವಕ್ಷೇತ್ರದಲ್ಲೇ ಕಾಂಗ್ರೆಸ್ ಈ ಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ನೇರ ರಾಜಕೀಯ ಸೆಣೆಸಾಟಕ್ಕೆ ನಾಂದಿ ಹಾಡಿದೆ.
ಕಿತ್ತದಂಡಿ ಗ್ರಾಮದಿಂದ ಯಾತ್ರೆ ಆರಂಭವಾಗಲಿದೆ. ಕೋಟೆ, ಹೊಸನಗರ ಕ್ರಾಸ್ ಹಾಗೂ ನೆಲವೊಡ್ಲು ಮಾರ್ಗವಾಗಿ ಯಾತ್ರೆಯು ಸಾಗಲಿದೆ. ಪಾದಯಾತ್ರೆ ಮುಕ್ತಾಯದ ಬಳಿಕ ಸ್ಥಳೀಯ ಎಪಿಎಂಸಿ ಆವರಣದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದೆ.
ಈ ಮಹತ್ವದ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ನೇತೃತ್ವ ವಹಿಸಲಿದ್ದಾರೆ. ಇವರೊಂದಿಗೆ ಸಚಿವರಾದ ಮಧು ಬಂಗಾರಪ್ಪ, ಕೆ.ಎಸ್. ಬಸವಂತಪ್ಪ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ವಿರೋಧ ಪಕ್ಷದ ನಾಯಕರ ತವರು ನೆಲದಲ್ಲೇ ಹಮ್ಮಿಕೊಳ್ಳಲಾಗಿರುವ ಈ ಯಾತ್ರೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.




