ಮೀನು ವ್ಯಾಪಾರ ಬಂದ್ ಮಾಡಿಸೋಕೆ ಹೇಳಿದ್ಯಾರು? – ಸಿಎಂ ಡಿಕೆಶಿ ಗರಂ!
Who told you to shut down the fish trade? - CM DKSh irate!

ಮಂಗಳೂರು : ಮಂಗಳೂರಿನ ಮೀನುಗಾರಿಕಾ ದಕ್ಕೆ ಬಂದರಿಗೆ ಇಂದು ಬೆಳ್ಳಂಬೆಳಗ್ಗೆ ಸಿಎಂ ಡಿ.ಕೆ ಶಿವಕುಮಾರ್ ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಸಿಎಂ ಡಿಕೆಶಿ ಮೀನುಗಾರರ ಸಮಸ್ಯೆಗಳನ್ನ ಆಲಿಸಿದರು.
ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಹಾಗೂ ಭದ್ರತೆಯ ಕಾರಣ ನೀಡಿ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಅಧಿಕಾರಿಗಳು ದಕ್ಕೆ ಬಂದರನ್ನು ಬಂದ್ ಮಾಡಿಸಿದ್ದರು. ಇದರಿಂದ ಮೀನುಗಾರರ ವ್ಯಾಪಾರಕ್ಕೆ ತೀವ್ರ ತೊಂದರೆಯಾಗಿತ್ತು. ಇದನ್ನು ಕಣ್ಣಾರೆ ಕಂಡ ಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಆಕ್ರೋಶಗೊಂಡರು.
ನಿಮ್ಮ ಸೆಕ್ಯೂರಿಟಿ ಯಾವನಿಗೆ ಬೇಕು? ನಾನು ಮೀನುಗಾರರ ಸಮಸ್ಯೆ ಹಾಗೂ ವ್ಯಾಪಾರ ಆಲಿಸಲು ಬಂದಿದ್ದೇನೆ. ಆದರೆ ನನ್ನ ಭದ್ರತೆಗಾಗಿ ಇವರ ವ್ಯಾಪಾರ ಬಂದ್ ಮಾಡಿಸೋಕೆ ಹೇಳಿದ್ಯಾರು? ಯಾರಾದರೂ ಆರ್ಡರ್ ಮಾಡಿದ್ದರೆ ಅವರನ್ನ ಸಸ್ಪೆಂಡ್ ಮಾಡುತ್ತೇನೆ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮೀನುಗಾರರ ಸಮಸ್ಯೆ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಅವರ ವ್ಯಾಪಾರ ಬಂದ್ ಮಾಡಲು ಯಾರು ಹೇಳಿದ್ದು? ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿಎಂ, ತಾವು ವ್ಯಾಪಾರ ಸ್ಥಗಿತಗೊಳಿಸುವಂತೆ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಭೇಟಿ ವೇಳೆ ಮಂಗಳೂರು ಮೀನುಗಾರಿಕಾ ಬಂದರಿನ ಮೀನುಗಾರರು ತಮ್ಮ ಹಲವು ತುರ್ತು ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಅವರ ಮುಂದಿಟ್ಟರು. ಬಂದರಿನ ಮೂಲಸೌಕರ್ಯ, ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಮೀನುಗಾರರು ಸಿಎಂ ಗಮನಕ್ಕೆ ತಂದರು.




