ಜಿಲ್ಲೆ

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಸಂಭ್ರಮ!

Celebrations of the 'Kaveri Teerthodbhava' at Talakaveri!

ಮಡಿಕೇರಿ : ಕೊಡಗಿನ ಜೀವನದಿ, ದಕ್ಷಿಣ ಭಾರತದ ಪವಿತ್ರ ನದಿಗಳಲ್ಲಿ ಒಂದಾದ ತಾಯಿ ಕಾವೇರಿಯ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 7:50 ರ ಶುಭ ಲಗ್ನದಲ್ಲಿ ಕಾವೇರಿ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ತಾಯಿ ಕಾವೇರಿಯು ಉದ್ಭವಿಸಲಿದ್ದಾಳೆ. ಈ ಪವಿತ್ರ ಹಾಗೂ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೊಡಗು ಜಿಲ್ಲೆ ಮಾತ್ರವಲ್ಲದೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಸಹಸ್ರಾರು ಭಕ್ತರು ತಲಕಾವೇರಿಗೆ ಆಗಮಿಸುತ್ತಿದ್ದಾರೆ.

ಮಧುವಣಗಿತ್ತಿಯಂತೆ ಸಿಂಗಾರಗೊಂಡ ತಲಕಾವೇರಿ

ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಬ್ರಹ್ಮಕುಂಡಿಕೆ ಹಾಗೂ ತಲಕಾವೇರಿ ಕ್ಷೇತ್ರವು ಮಧುವಣಗಿತ್ತಿಯಂತೆ ಸರ್ವಾಂಗಸುಂದರವಾಗಿ ಸಿಂಗಾರಗೊಂಡಿದೆ. ದೇವಸ್ಥಾನದ ಆವರಣ ಹಾಗೂ ಪರಿಸರವನ್ನು ವಿವಿಧ ಬಣ್ಣ ಬಣ್ಣದ ಹೂಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿದೆ. ದೇವಾಲಯದ ಸುತ್ತಲೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ರೀತಿಯಲ್ಲಿ ವಿದ್ಯುತ್ ದೀಪಗಳನ್ನು ಅಲಂಕರಿಸಲಾಗಿದ್ದು, ಇಡೀ ತಲಕಾವೇರಿ ಕ್ಷೇತ್ರವು ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದೆ. ಭಕ್ತರ ಸುಲಭ ದರ್ಶನಕ್ಕೆ ಮತ್ತು ಧಾರ್ಮಿಕ ವಿಧಿವಿಧಾನಗಳಿಗೆ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಸಮಿತಿಯಿಂದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ತಲಕಾವೇರಿಗೆ ತಲುಪಿದ ದೇವ ಬಂಡಾರ

ತೀರ್ಥೋದ್ಭವದ ಧಾರ್ಮಿಕ ವಿಧಿವಿಧಾನಗಳ ಪ್ರಮುಖ ಅಂಗವಾಗಿ, ಭಗಂಡೇಶ್ವರ ದೇವಾಲಯದಿಂದ ಪವಿತ್ರ ದೇವ ಬಂಡಾರವು ಬಿಗಿ ಭದ್ರತೆಯಲ್ಲಿ ಮೆರವಣಿಗೆಯ ಮೂಲಕ ತಲಕಾವೇರಿಗೆ ತಲುಪಿದೆ. ತಲಕಾವೇರಿ ತಲುಪಿದ ದೇವ ಬಂಡಾರವನ್ನು ಸಂಪ್ರದಾಯಬದ್ಧವಾಗಿ ಹಾಗೂ ವೈದಿಕ ಪೂಜಾ ಕೈಂಕರ್ಯಗಳೊಂದಿಗೆ ಸ್ವಾಗತಿಸಲಾಗಿದ್ದು, ಸದ್ಯ ಬ್ರಹ್ಮಕುಂಡಿಕೆಯ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ಮುಂದುವರಿದಿವೆ.

ಪಂಚಾಂಗದ ಪ್ರಕಾರ ಇಂದು ರಾತ್ರಿ 7:50ಕ್ಕೆ ಮೇಷ ಲಗ್ನದಲ್ಲಿ ತಾಯಿ ಕಾವೇರಿಯು ಪವಿತ್ರ ಕುಂಡಿಕೆಯಲ್ಲಿ ಜಲರೂಪದಿಂದ ತೀರ್ಥರೂಪಿಣಿಯಾಗಿ ಉದ್ಭವಿಸಲಿದ್ದಾಳೆ. ಈ ಪವಿತ್ರ ಕ್ಷಣದಲ್ಲಿ ಕಾವೇರಿ ಕುಂಡಿಕೆಯಿಂದ ನೈಸರ್ಗಿಕವಾಗಿ ಉದ್ಭವಿಸುವ ತೀರ್ಥವನ್ನು ಪಡೆಯಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button
Verified by MonsterInsights