Mandyaಜಿಲ್ಲೆ

ವಿಚಾರಣಾಧೀನ ಕೈದಿಗೆ ರಾಜಾತಿಥ್ಯ ಕೇಸ್‌ – ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ವರ್ಗಾವಣೆ!

'Royal treatment' for an undertrial prisoner case – Mandya Jail Superintendent Shanthamma transferred!

ಮಂಡ್ಯ : ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನಿಗೆ ರಾಜಾತಿಥ್ಯ ಕಲ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಭೂ ಅಕ್ರಮ ಪ್ರಕರಣದಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ಮಹಮದ್ ಹುಸೇನ್‌ಗೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಬೆನ್ನು ನೋವಿನ ನೆಪವೊಡ್ಡಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯಾಯಾಲಯಕ್ಕೂ ಯಾವುದೇ ಮಾಹಿತಿ ನೀಡದೆ ಆತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ಕೈದಿ ಹುಸೇನ್ ತನ್ನ ಗೆಳತಿಯೊಂದಿಗೆ ರಾಜಾತಿಥ್ಯ ಅನುಭವಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು.

ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ. ಸಿ. ಚಂದ್ರಶೇಖರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಕ್ರಮ ಬಯಲಾಗಿದೆ. ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡದೆ ವಿಚಾರಣಾಧೀನ ಕೈದಿಯನ್ನು ಆಸ್ಪತ್ರೆಗೆ ಕಳುಹಿಸಿರುವುದಕ್ಕೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಸ್ಥಳದಲ್ಲೇ ಜೈಲು ಅಧೀಕ್ಷಕಿ ಶಾಂತಮ್ಮ ಅವರನ್ನು ತರಾಟೆಗೆ ತೆಗೆದುಕೊಂಡು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

ಮೇಲಾಧಿಕಾರಿಗಳ ಕಠಿಣ ಕ್ರಮ ನ್ಯಾಯಾಧೀಶರ ತರಾಟೆ ಹಾಗೂ ಪ್ರಾಥಮಿಕ ತನಿಖೆ ವೇಳೆ ಅಧೀಕ್ಷಕಿ ಶಾಂತಮ್ಮ ಅವರ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯು, ಅಧೀಕ್ಷಕಿ ಶಾಂತಮ್ಮ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Comments (0)

Your email address will not be published. Required fields are marked *

Back to top button