ಬಾಣಂತಿಯರ ಉಪಹಾರದಲ್ಲಿ ಸತ್ತ ಹಲ್ಲಿ ಪತ್ತೆ – ಹಾವೇರಿ ಜಿಲ್ಲಾಸ್ಪತ್ರೆಯ ಕ್ಯಾಂಟೀನ್ ವಿರುದ್ಧ ಆಕ್ರೋಶ!
Dead lizard found in meal served to new mothers – Outrage against Haveri District Hospital canteen!

ಹಾವೇರಿ : ಬಾಣಂತಿಯರ ಉಪಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ ಹಾವೇರಿಯಲ್ಲಿರುವ ತಾಯಿ-ಮಕ್ಕಳ ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ನಡೆದಿದೆ. ಬಾಣಂತಿಯರು ಹಾಗೂ ರೋಗಿಗಳಿಗಾಗಿ ತಯಾರಿಸಿದ್ದ ಉಪಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಬೆಳಗಿನ ಉಪಹಾರಕ್ಕಾಗಿ ಕೇಸರಿ ಬಾತ್ ತಯಾರಿಸಲಾಗಿತ್ತು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಣಂತಿಗೆ ಆಕೆಯ ಸಂಬಧಿಕರು ಕೇಸರಿಬಾತ್- ಉಪ್ಪಿಟ್ಟು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಕೇಸರಿಬಾತ್ನಲ್ಲಿ ಹಲ್ಲಿ ಪತ್ತೆಯಾಗಿದೆ.
ಹಲ್ಲಿ ಪತ್ತೆಯಾದ ಬೆನ್ನಲ್ಲೇ ರೋಗಿಗಳ ಸಂಬಂಧಿಕರು ಕ್ಯಾಂಟೀನ್ಗೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಯಾಂಟೀನ್ ಒಳಗೆ ಪರಿಶೀಲನೆ ನಡೆಸಿದಾಗ ಅಚ್ಚರಿಯ ಸಂಗತಿಯೊಂದು ಬಯಲಾಗಿದ್ದು, ಹಲ್ಲಿಯಷ್ಟೇ ಅಲ್ಲದೆ ಊಟ ನೀಡುತ್ತಿದ್ದ ಪ್ಲೇಟ್ಗಳ ಮೇಲೆಯೇ ಜಿರಳೆಗಳು ಓಡಾಡುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಯಲ್ಲಿ ಇಷ್ಟು ಕಳಪೆ ಮಟ್ಟದ ಸ್ವಚ್ಛತೆ ಮತ್ತು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಣಂತಿ, ನವಜಾತ ಶಿಶುಗಳ ಆರೋಗ್ಯ ರಕ್ಷಣೆ ಮಾಡಬೇಕಾದ ಆಸ್ಪತ್ರೆಯ ಆವರಣದಲ್ಲೇ ಈ ರೀತಿಯ ನಿರ್ಲಕ್ಷ್ಯ ತೋರಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಹಾಗೂ ರೋಗಿಗಳ ಸಂಬಂಧಿಕರು ಪ್ರಶ್ನಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕ್ಯಾಂಟೀನ್ ನಿರ್ವಾಹಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕ್ಯಾಂಟೀನ್ ಪರವಾನದಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.




