
ಕಲಬುರಗಿ : ಸೇಡಂ ಪಟ್ಟಣದ ಹೊರವಲಯದಲ್ಲಿ ಹರಿಯುವ ಕಮಲಾವತಿ ನದಿಗೆ ಸಿಮೆಂಟ್ ಕಾರ್ಖಾನೆಯೊಂದರ ವಿಷಪೂರಿತ ತ್ಯಾಜ್ಯ ನೀರು ಸೇರ್ಪಡೆಯಾಗಿದ್ದು, ಇದರ ಪರಿಣಾಮವಾಗಿ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪಿದೆ. ಈ ಘಟನೆಯಿಂದ ಸ್ಥಳೀಯ ಸಾರ್ವಜನಿಕರು ಹಾಗೂ ರೈತರು ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಲಾವತಿ ನದಿಯು ಸ್ಥಳೀಯರ ಹಾಗೂ ಜೀವರಾಶಿಗಳ ಪ್ರಮುಖ ನೀರು ಸರಬರಾಜು ಮೂಲವಾಗಿದೆ. ಆದರೆ, ಇತ್ತೀಚೆಗೆ ಸಮೀಪದ ಸಿಮೆಂಟ್ ಕಾರ್ಖಾನೆಯಿಂದ ಯಾವುದೇ ಸಂಸ್ಕರಣೆ ಮಾಡದೆ ನೇರವಾಗಿ ವಿಷಪೂರಿತ ರಾಸಾಯನಿಕಯುಕ್ತ ನೀರನ್ನು ನದಿಗೆ ಬಿಡಲಾಗಿದೆ. ರಾಸಾಯನಿಕಗಳ ಪ್ರಭಾವದಿಂದಾಗಿ ನದಿಯಲ್ಲಿ ಆಮ್ಲಜನಕದ ಮಟ್ಟ ಕುಸಿದು, ಸಾವಿರಾರು ಮೀನುಗಳು ಜೀವಬಿಟ್ಟಿವೆ. ಆಕ್ರೋಶ:
ನದಿ ನೀರು ಮಲಿನಗೊಂಡಿರುವುದರಿಂದ ಕಮಲಾವತಿ ನಡಿಯನ್ನು ನಂಬಿಕೊಂಡಿರುವ ಜಲಚರಗಳು ಮಾತ್ರವಲ್ಲದೆ, ನದಿ ನೀರನ್ನು ಕುಡಿಯುವ ಮೂಕ ಪ್ರಾಣಿಗಳು, ಪಕ್ಷಿಗಳು ಮತ್ತು ದನಕರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಸೇಡಂ ಜನರ ಜೀವನಾಡಿಯಾಗಿರುವ ಕಮಲಾವತಿ ನದಿಯ ನೀರನ್ನು ತಕ್ಷಣವೇ ಪ್ರಯೋಗಾಲಯಕ್ಕೆ ಕಳುಹಿಸಿ, ನೀರಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ನದಿಗೆ ರಾಸಾಯನಿಕ ತ್ಯಾಜ್ಯ ಬಿಟ್ಟು ಪರಿಸರ ನಾಶ ಮಾಡುತ್ತಿರುವ ಬೇಜವಾಬ್ದಾರಿ ಸಿಮೆಂಟ್ ಕಾರ್ಖಾನೆಯ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಹಾಗೂ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




