ಬಿ.ಸಿ.ರೋಡ್‌ನಲ್ಲಿ ಯುವತಿಯ ಬರ್ಬರ ಹತ್ಯೆ – ಆರೋಪಿ ಚೇತನ್ ಅರೆಸ್ಟ್!

ಮಂಗಳೂರು : ಬಂಟ್ವಾಳದ ಬಿ.ಸಿ.ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯೊಬ್ಬಳ ಬರ್ಬರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಬೀಳಿಸಿದೆ. ಸಾರ್ವಜನಿಕರ ಮುಂದೆಯೇ ಹಾಡಹಗಲೇ ಮಚ್ಚಿನಿಂದ ದಾಳಿ ನಡೆಸಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿ ಚೇತನ್‌ನನ್ನು ಅರೆಸ್ಟ್ ಮಾಡಿದ್ದಾರೆ.
ಲಾವಣ್ಯ ಕೊಲೆ ಕೇಸ್ ಸಂಬಂಧ ಆರೋಪಿಯ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಇಂದು ಹಂತಕ ಚೇತನ್‌ನನ್ನು ಬಂಟ್ವಾಳ ಪೊಲೀಸರು ಅರೆಸ್ಟ್ ಮಾಡಿದ್ದು, ಸಂಜೆ ಒಳಗಾಗಿ ಬಂಟ್ವಾಳ ನಾಯಾಲಯದ ಮುಂದೆ ಹಾಜರು ಪಡಿಸುವ ಸಾಧ್ಯತೆಯಿದೆ.
ಕೊಲೆಯಾದ ಲಾವಣ್ಯ ಕಕ್ಕೆಪದವು ಗ್ರಾಮದ ನಿವಾಸಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುವಾಗ ಬಿ.ಸಿ. ರೋಡಿನಿಂದ ಕಕ್ಯಪದವು ಹೋಗುವ ಸರಕಾರಿ ಬಸ್ಸಿನಲ್ಲಿ ಯುವತಿ ಕುಳಿತಿದ್ದಾಗ ಏಕಾಏಕಿ ಆರೋಪಿ ಚೇತನ್ ಬಸ್ಸಿನ ಒಳಗಡೆ ಬಂದು ಹೊರಗಡೆ ಎಳೆದೊಯ್ದು ಮಚ್ಚಿನಿಂದ ದಾಳಿ ನಡೆಸಿದ್ದಾನೆ.
ನಾಲ್ಕು ವರ್ಷಗಳ ಹಿಂದೆ ಲಾವಣ್ಯ ಮತ್ತು ಚೇತನ್ ನಡುವೆ ಪ್ರೇಮ ಸಂಬಂಧವಿದ್ದಿತ್ತು. ಬ್ರೇಕಪ್ ಬಳಿಕವೂ ಲಾವಣ್ಯಗೆ ಕಿರುಕುಳ ನೀಡುತ್ತಿದ್ದ. ನೀನೇ ಬೇಕು ಅಂತ ಚೇತನ್ ಲಾವಣ್ಯ ಹಿಂದೆ ಬಿದ್ದಿದ್ದ. ಮದುವೆಗೆ ಯುವತಿ ಪೋಷಕರ ವಿರೋಧವೂ ಇತ್ತು.
ನಿನ್ನೆ ಒಂದೇ ಬಸ್ನಲ್ಲಿ ಲಾವಣ್ಯ-ಚೇತನ್ ಪ್ರಯಾಣ ಬೆಳೆಸಿದ್ದರು. ಯುವತಿ ಬಸ್‌ನಲ್ಲೇ ಕುಳಿತು ಬಾವ ಗೌತಮ್ ಜೊತೆ ಮಾತನಾಡಿದ್ದಳು. ಚೇತನ್ ಕಿರುಕುಳದ ಬಗ್ಗೆ ಲಾವಣ್ಯ ಫೋನ್ನಲ್ಲಿ ಹೇಳ್ತಿದ್ದಳು. ಈ ವೇಳೆ ಚೇತನ್‌ಗೆ ಫೋನ್ ಕೊಡು ಎಂದು ಬಾವ ಗೌತಮ್ ಹೇಳಿದ್ದು, ಫೋನ್ ಕೊಡುವಷ್ಟರಲ್ಲಿ ಚೇತನ್ ಯುವತಿಯ ಕತ್ತು ಸೀಳಿದ್ದಾನೆ.




