ರಕ್ತಸಿಕ್ತ ಗೋವಿನ ತಲೆಗಳು-ಪೊಲೀಸ್ ವಿರುದ್ಧ ಬಿಜೆಪಿ ಆಕ್ರೋಶ!
BJP protest against Cow heads all over city

ಬಳ್ಳಾರಿ: ಗಣಿ ನಾಡು ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿ ಗೋವಿನ ತಲೆಗಳನ್ನು (ರುಂಡ) ಕಡಿದು ಸಾರ್ವಜನಿಕ ರಸ್ತೆಯಲ್ಲಿ ಬಿಸಾಡಿರುವ ವಿಕೃತ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಕುರಿತು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ (ಅನಿಲ್ ನಾಯ್ಡು), ಜಿಲ್ಲಾ ಪೊಲೀಸ್ ಆಡಳಿತದ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಹಿಂದೂಗಳ ಭಾವನೆಗೆ ಧಕ್ಕೆ – ಜೀಪ್ ಅಡ್ಡಗಟ್ಟಿ ಪ್ರತಿಭಟನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಕುಮಾರ್ ಮೋಕಾ, “ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಹಿಂದೂಗಳು ಹೆಚ್ಚಾಗಿ ವಾಸಿಸುವ ಕಪ್ಪಗಲ್ ರಸ್ತೆಯಲ್ಲಿ ಗೋವಿನ ತಲೆಗಳನ್ನು ಕಡಿದು ಬಿಸಾಡಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಸಮಾಜದಲ್ಲಿ ಶಾಂತಿ ಕದಡುವ ವ್ಯವಸ್ಥಿತ ಸಂಚು. ಈ ಘಟನೆಯನ್ನು ಖಂಡಿಸಿ ನಾವು ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದ್ದೇವೆ” ಎಂದರು.
ಪೊಲೀಸರು ಗೋವಿನ ತಲೆಗಳನ್ನು ಪಶುಸಂಗೋಪನಾ ಇಲಾಖೆಯ ಮೂಲಕ FSL (ವಿಧಿವಿಜ್ಞಾನ ಪ್ರಯೋಗಾಲಯ) ವರದಿಗಾಗಿ ಕಳುಹಿಸಿದ್ದರು. ಆದರೆ, ಆ ಬಳಿಕ ನಿಯಮಾನುಸಾರ ಗೋವಿನ ತಲೆಗಳನ್ನು ನಮಗೆ ಹಸ್ತಾಂತರಿಸದೆ, ಪೊಲೀಸರೇ ಜೀಪ್‌ನಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜೀಪ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಅಂತಿಮವಾಗಿ ಹಿಂದೂ ಸಂಪ್ರದಾಯದಂತೆ ಸ್ಮಶಾನದಲ್ಲಿ ಗೋವಿನ ರುಂಡಗಳ ಅಂತ್ಯಸಂಸ್ಕಾರ (ಮಣ್ಣು) ಮಾಡಲಾಗಿದೆ ಎಂದು ವಿವರಿಸಿದರು.
“ಹಳಿತಪ್ಪಿದ ಕಾನೂನು- 500 ಹಸುಗಳ ಹತ್ಯೆ!”
ಬಳ್ಳಾರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ ಜಿಲ್ಲಾಧ್ಯಕ್ಷರು, ಇತ್ತೀಚಿನ ದಿನಗಳಲ್ಲಿ ಬಳ್ಳಾರಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಹಸುಗಳನ್ನು ಅಕ್ರಮವಾಗಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ನಾವು ಪೊಲೀಸರಿಗೆ ನಿಖರ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ನಿರ್ದಿಷ್ಟ ಸಮುದಾಯವನ್ನು ಮೆಚ್ಚಿಸಲು ಜಿಲ್ಲಾ ಪೊಲೀಸ್ ಆಡಳಿತ ಹಾದಿ ತಪ್ಪಿದೆ ಎಂದು ಗುಡುಗಿದರು.
ಗೋಹತ್ಯೆ ಮಾಡಿದವರನ್ನು ಬಂಧಿಸುವಂತೆ ಆಗ್ರಹಿಸಿ ಶಾಂತಿಯುತವಾಗಿ ಹೋರಾಟ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆಯೇ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ್ ಅವರು ಕಾನೂನು ಸುವ್ಯವಸ್ಥೆಗೆ ಭಂಗ ತಂದಿದ್ದಾರೆ ಎಂಬ ಸುಳ್ಳು ನೆಪವೊಡ್ಡಿ 11 ಜನ ಬಿಜೆಪಿ ಕಾರ್ಯಕರ್ತರ ಮೇಲೆ ಉಲ್ಟಾ ಪ್ರಕರಣ ದಾಖಲಿಸಿದ್ದಾರೆ ಎಂದು ಅನಿಲ್ ಕುಮಾರ್ ತೀವ್ರ ಅಸಮಾಧಾನ ಹೊರಹಾಕಿದರು.
ಕಪ್ಪಗಲ್ ರಸ್ತೆಯಲ್ಲಿ ಗೋವಿನ ರುಂಡ ಸೃಷ್ಟಿಸಿದ ಅಸಲಿ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ನಗರದಲ್ಲಿ ಎಲ್ಲೆಂದರಲ್ಲಿ ಬಹಿರಂಗವಾಗಿ (ಓಪನ್ ಆಗಿ) ಮಟನ್ ಕಡಿಯುವವರನ್ನು ತಕ್ಷಣವೇ ನಿಯಂತ್ರಿಸಬೇಕು. ನಗರದ ಕುಖ್ಯಾತ ’10 ನಂಬರ್ ಹೋಟೆಲ್’ ಅನ್ನು ತಕ್ಷಣವೇ ಬಂದ್ ಮಾಡಬೇಕು.
ಒಂದು ವೇಳೆ ಪೊಲೀಸರು ಕಳ್ಳರ ವಿರುದ್ಧ ಕ್ರಮ ಕೈಗೊಳ್ಳದೆ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಮುಂದಿನ ದಿನಗಳಲ್ಲಿ ಬಳ್ಳಾರಿಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
#BallariNews #AnilKumarMoka #AnilNaidu #CowSlaughter #KappagalRoad #BJPBallari #Hindutva #Protest #BallariPolice #BreakingNews #LawAndOrder #FreedomTVKannada #KarnatakaPolitics




