ಕ್ರೈಂ ಸ್ಟೋರಿ

ರೇಣುಕಾಸ್ವಾಮಿ ಕೇಸ್‌ನ ಸಾಕ್ಷಿಗೆ ಬೆದರಿಕೆ – ಆರೋಪಿ ವಿಚಾರಣೆ ವೇಳೆ ಕೆಲ ವಿಚಾರಗಳು ಬಯಲು!

Threat to witness in Renukaswamy case - Some things come to light during the interrogation of the accused!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ದಿನೇ ದಿನೇ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದಡಿ ಪುನೀತ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿ ಬಯಲಾಗಿದೆ.

ಪ್ರಕರಣದ ಪ್ರಮುಖ ಸಾಕ್ಷಿದಾರರಾದ ಸಂದೀಪ್, ತುಮಕೂರಿನ ಖಾಸಗಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಜೂನ್ 25ರಂದು ಆರೋಪಿ ಆಕರ್ಷ್ ಎಂಬಾತ ಸಂದೀಪ್‌ಗೆ ಕರೆ ಮಾಡಿ, ಮಾತನಾಡಬೇಕೆಂದು ಆತನನ್ನು ಭೇಟಿಯಾಗಿದ್ದಾನೆ. ಬಳಿಕ ಸಂದೀಪ್‌ನನ್ನು ಕಾರಿನಲ್ಲಿ ಕೂರಿಸಿಕೊಂಡು, ನ್ಯಾಯಾಲಯದಲ್ಲಿ ಆತ ನೀಡಿದ ಹೇಳಿಕೆಗಳ ಬಗ್ಗೆ ವಿಚಾರಣೆ ನಡೆಸಿದ್ದಾನೆ.

ಅಷ್ಟೇ ಅಲ್ಲದೆ, ವಕೀಲರೊಬ್ಬರು ವಾಟ್ಸಾಪ್ ಕರೆ ಮೂಲಕ ಸಂದೀಪ್‌ಗೆ ಸಂಪರ್ಕ ಮಾಡಿ, ತಾವು ಹೇಳಿದಂತೆಯೇ ಕೋರ್ಟ್‌ನಲ್ಲಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆಯಾದ ಮೂರು ದಿನಗಳ ನಂತರ ಕಾಮಾಕ್ಷಿಪಾಳ್ಯ ಪೊಲೀಸರು ಬಾರ್‌ಗೆ ಬಂದು ಸಿಸಿಟಿವಿ ಮತ್ತು ಡಿವಿಆರ್ ಪಡೆದು ಸಹಿ ಹಾಕಿಸಿಕೊಂಡರು. ಪೊಲೀಸರು ಸೂಚಿಸಿದ ಜಾಗದಲ್ಲಿ ನಾನು ಸಹಿ ಹಾಕಿದ್ದೇನೆ, ಉಳಿದಂತೆ ನನಗೇನೂ ಗೊತ್ತಿಲ್ಲ ಎಂದು ಹೇಳುವಂತೆ ಆರೋಪಿಗಳು ಸಂದೀಪ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ವಿಚಾರಣೆಯಲ್ಲಿ ಆರೋಪಿಗಳ ಹೈಡ್ರಾಮಾ

ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಸೇರಿದಂತೆ ಮೂವರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು, ನ್ಯಾಯಾಲಯದ ಅನುಮತಿಯೊಂದಿಗೆ ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ, ನನಗೇನೂ ಗೊತ್ತಿಲ್ಲ, ಯಾರು ಏನು ಹೇಳಿಕೊಟ್ಟಿಲ್ಲ ಎಂದು ಪುನೀತ್ ಹೈಡ್ರಾಮಾ ಮಾಡಿದ್ದಾನೆ. ಆದರೂ, ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನಿರ್ಮಾಪಕರಿಗೆ ಸಂಕಷ್ಟದ ಭೀತಿ?

ಈ ಬೆದರಿಕೆ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸಾಕ್ಷಿಗಳನ್ನು ಪ್ರಭಾವಿಸಲು ನಿರ್ಮಾಪಕರೊಬ್ಬರು ಸಾಥ್ ನೀಡಿದ್ದಾರೆ ಎಂಬ ಅನುಮಾನ ದಟ್ಟವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.

ಬಂಧಿತ ಆರೋಪಿ ಪುನೀತ್‌ನ ಮೊಬೈಲ್ ಅನ್ನು ವಶಕ್ಕೆ ಪಡೆದು FSLಗೆ ರವಾನಿಸಲಾಗಿದೆ. ಒಂದು ವೇಳೆ ಮೊಬೈಲ್ ಡೇಟಾ ರಿಟ್ರೀವ್ ಆದ ಬಳಿಕ ನಿರ್ಮಾಪಕರೊಂದಿಗೆ ಸಂಪರ್ಕ ಅಥವಾ ಸಂಭಾಷಣೆ ಸಾಬೀತಾದರೆ, ಅವರು ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಇದೀಗ ಪ್ರಕರಣವು ಗಂಭೀರ ಸ್ವರೂಪ ಪಡೆದುಕೊಂಡಿದೆ.

Comments (0)

Your email address will not be published. Required fields are marked *

Back to top button