ರಾಜ್ಯ

ಕರ್ನಾಟಕ ಬಂದ್​ಗೆ ಎಲ್ಲೆಡೆಯಿಂದ ನೀರಸ ಪ್ರತಿಕ್ರಿಯೆ – ಎಂದಿನಂತೆ ಬಸ್‌ ಸಂಚಾರ!

Lukewarm response to Karnataka Bandh across the board – bus services running as usual!

ಬೆಂಗಳೂರು : ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿನಂತೆ ಸಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಯಾವುದೇ ವ್ಯತ್ಯಯವಿಲ್ಲದೆ ಬಸ್, ಆಟೋ ಹಾಗೂ ಕ್ಯಾಬ್‌ಗಳು ಸಂಚರಿಸುತ್ತಿವೆ.

ಬಂದ್ ಕರೆ ಪ್ರತಿಭಟನೆಗಷ್ಟೇ ಸೀಮಿತವಾಗಿದ್ದು, ಪ್ರಮುಖ ನಗರಗಳಲ್ಲಿ ಅಂಗಡಿ-ಮುಂಗಟ್ಟುಗಳು ಮತ್ತು ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಲ್ಲೂ ಬಂದ್‌ನ ಯಾವುದೇ ಪ್ರಭಾವ ಕಂಡುಬಂದಿಲ್ಲ. ಎಂದಿನಂತೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸುಗಮವಾಗಿದೆ. ಆಟೋರಿಕ್ಷಾ ಮತ್ತು ಕ್ಯಾಬ್‌ಗಳು ರಸ್ತೆಗಿಳಿದಿದ್ದು, ಕಚೇರಿಗಳಿಗೆ ತೆರಳುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳು ಎಂದಿನಂತೆ ತೆರೆದಿವೆ.

ಇನ್ನು ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಮತ್ತು ಕಲಬುರಗಿಯಲ್ಲೂ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಭಾಗದಲ್ಲೂ ಬಸ್ ಸಂಚಾರ ಎಂದಿನಂತೆ ಮುಂದುವರಿದಿದೆ. ಜನಜೀವನದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.

ಬೆಂಗಳೂರಿನಲ್ಲಿ ಯಾವುದೇ ಬಂದ್ ವಾತಾವರಣ ಇಲ್ಲದಿರುವ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ತೆರಳುವ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ತಮಿಳುನಾಡಿನತ್ತ ಬಸ್‌ಗಳು ಯಶಸ್ವಿಯಾಗಿ ಹೊರಟಿವೆ.

Comments (0)

Your email address will not be published. Required fields are marked *

Back to top button