ಜೈಲಿನಿಂದ ರಿಲೀಸ್ ಆದ ಮರುದಿನವೇ ಸಾಕ್ಷಿದಾರನ ಭೀಕರ ಹತ್ಯೆ!
Witness brutally murdered the very next day after release from jail!

ಬೆಳಗಾವಿ : ಕೋಕಾ ಕೇಸ್‌ನಲ್ಲಿ ಸಾಕ್ಷಿಯಾಗಿದ್ದ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ನಡೆದಿದೆ.
ಗೋಕಾಕ್ ಮೂಲದ ಮುತ್ತುಸ್ವಾಮಿ (30) ಕೊಲೆಯಾದ ದುರ್ದೈವಿ. ಹಳೇ ವೈಷಮ್ಯದಿಂದ ಜೈಲಿನಿಂದ ರಿಲೀಸ್ ಆದ ಮರುದಿನವೇ ಸಾಕ್ಷಿದಾರನನ್ನು ಕೊಲೆ ಮಾಡಿದ್ದಾರೆ.
ಗೋಕಾಕ್‌ನ ಸಿದ್ದಪ್ಪ ಕೊಲೆ ಕೇಸ್‌ನಲ್ಲಿ ಭಾಗಿಯಾಗಿದ್ದ ಆರೋಪಿಗಳ ಮೇಲೆ ‘ಕೋಕಾ’ ಹೇರಲಾಗಿತ್ತು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ಮರುದಿನವೇ, ತಮ್ಮ ವಿರುದ್ಧ ಸಾಕ್ಷಿ ನುಡಿಯುತ್ತಿದ್ದ ಮುತ್ತುಸ್ವಾಮಿಯನ್ನು ಮುಗಿಸಲು ಸಂಚು ರೂಪಿಸಿದ್ದಾರೆ.
ಮುತ್ತುಸ್ವಾಮಿ ಹಿಡಕಲ್ ಡ್ಯಾಂ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಆಟೋ ಹಾಗೂ ಎರಡು ಬೈಕ್‌ಗಳಲ್ಲಿ ಬಂದ ಗ್ಯಾಂಗ್ ಆತನನ್ನು ಹತ್ಯೆಗೈದಿದೆ.
ಕೊಲೆಯಾದ ಮುತ್ತುಸ್ವಾಮಿಗೆ ಟೈಗರ್ ಗ್ಯಾಂಗ್ನಿಂದ ಜೀವಬೆದರಿಕೆ ಇತ್ತು ಎಂಬ ಆರೋಪವಿದೆ. ಸಾವಿಗೂ ಮುನ್ನ ಮುತ್ತುಸ್ವಾಮಿ ತನ್ನ ಅಕ್ಕನಿಗೆ ನನ್ನ ಕೊಲೆಯಾದ್ರೆ ಅದಕ್ಕೆ ಟೈಗರ್ ಗ್ಯಾಂಗ್ ಕಾರಣ ಎಂದು ಹೇಳಿದ್ದನಂತೆ. ಕೊಲೆ ಮಾಡಿದವರಲ್ಲಿ ಗಂಗಪ್ಪ ಎಂಬಾತನ ಕೈವಾಡವಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




