2ನೇ ದಿನಕ್ಕೆ ಕಾಲಿಟ್ಟ ʻಬಳ್ಳಾರಿ ಚಲೋʼ – ಡಿಕೆಶಿ ಸರ್ಕಾರದ ವಿರುದ್ಧ ಕೇಸರಿಪಡೆ ರಣಕಹಳೆ!
'Ballari Chalo' enters Day 2 – Saffron brigade sounds the war bugle against the DKShi-led government!

ಬಳ್ಳಾರಿ : ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರಿನಿಂದ ಆರಂಭವಾಗಿರುವ ಈ ಪಾದಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನೇತೃತ್ವವಹಿಸಿದ್ದಾರೆ.
ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ 2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಈಗಿನಿಂದಲೇ ರಣಕಹಳೆ ಮೊಳಗಿಸಿದೆ.
ಪಾದಯಾತ್ರೆಯ ಎರಡನೇ ದಿನವಾದ ಇಂದು ಮುಖಂಡರ ದಂಡೇ ಹರಿದುಬಂದಿದೆ. ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಗಾಲಿ ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಹಿರಿಯ ನಾಯಕ ಸಿ.ಟಿ. ರವಿ ಸೇರಿದಂತೆ ನೂರಾರು ಪ್ರಮುಖ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ.
ಇಂದಿನ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದ್ದು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಕೇಸರಿಪಡೆ ಸಜ್ಜಾಗಿದೆ. ಈ ಹೋರಾಟದ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಮುಂಬರುವ ಚುನಾವಣೆಗೆ ಈಗಲೇ ಅಡಿಪಾಯ ಹಾಕಲು ಬಿಜೆಪಿ ರಣತಂತ್ರ ರೂಪಿಸಿದೆ.




