ಬೆಂಗಳೂರಿನಲ್ಲೂ ‘ಸಂಪುಟ’ ಸರ್ಕಸ್ – ಖರ್ಗೆ ಭೇಟಿಯಾದ ಸಿಎಂ, ಡಿಸಿಎಂ!
'Samputa' circus in Bengaluru too - CM, DCM meet Kharge!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗಿದೆ. ಈ ಬೆನ್ನಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸದಾಶಿವನಗರದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ತೆರಳಿದ ಸಿಎಂ ಮತ್ತು ಡಿಸಿಎಂ, ಸಂಪುಟ ಸೇರ್ಪಡೆ ಹಾಗೂ ಹೈಕಮಾಂಡ್‌ನ ಆಕ್ಷೇಪಗಳ ಕುರಿತು ಪ್ರಮುಖ ಚರ್ಚೆ ನಡೆಸಿದ್ದಾರೆ.
ಮೊನ್ನೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಸಭೆ ನಡೆದಿತ್ತು. ಆದರೆ, ಆ ಮಾತುಕತೆಯ ನಡುವೆಯೇ ಮಲ್ಲಿಕಾರ್ಜುನ ಖರ್ಗೆ ಅವರು ತುರ್ತಾಗಿ ಬೆಂಗಳೂರಿಗೆ ವಾಪಸ್ ಆಗಿದ್ದರು.
ಹೈಕಮಾಂಡ್ ಮಟ್ಟದಲ್ಲಿ ಬಾಕಿ ಉಳಿದಿದ್ದ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ಅಂತಿಮ ಪಟ್ಟಿಗೆ ಅನುಮೋದನೆ ಪಡೆಯಲು ಸಿಎಂ ಹಾಗೂ ಡಿಸಿಎಂ ಇಂದು ಖರ್ಗೆ ಅವರ ಸದಾಶಿವನಗರ ನಿವಾಸಕ್ಕೆ ಬಂದಿದ್ದರು. ಇದೀಗ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ್ ಖರ್ಗೆ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.




