ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಐವರು ಆರೋಪಿಗಳು ಅರೆಸ್ಟ್!
Allegation of gang-rape of a young woman – five accused arrested!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಭೇಟಿ ಮಾಡುವ ನೆಪದಲ್ಲಿ ಯುವತಿಯೊಬ್ಬಳನ್ನು ಕರೆಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸಂತ್ರಸ್ತ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ಭಾಗದಲ್ಲಿ ವಾಸವಾಗಿದ್ದ ಯುವತಿಗೆ ಆರೋಪಿಗಳ ಪೈಕಿ ಇಬ್ಬರ ಪರಿಚಯವಿತ್ತು ಎನ್ನಲಾಗಿದೆ. ಘಟನೆಯ ದಿನದಂದು ಎ1 ಆರೋಪಿ ಸೋಮಶೇಖರ್, ʻನಮ್ಮ ಸ್ನೇಹಿತರು ಬಂದಿದ್ದಾರೆ, ಸಿಗೋಣ ಬಾʼ ಎಂದು ಯುವತಿಗೆ ಕರೆ ಮಾಡಿ ತಲಘಟ್ಟಪುರ ವ್ಯಾಪ್ತಿಯ ಮಾರುತಿನಗರಕ್ಕೆ ಕರೆಸಿಕೊಂಡಿದ್ದ.
ಯುವತಿ ದೇವನಹಳ್ಳಿಯಿಂದ ರ್ಯಾಪಿಡೋ ಬುಕ್ ಮಾಡಿಕೊಂಡು ಮಾರುತಿನಗರಕ್ಕೆ ಬಂದಿದ್ದಳು. ಈ ವೇಳೆ ಆರೋಪಿ ಅಂಬರೀಶ್ ಎಂಬಾತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಗಳ ರಾಕ್ಷಸೀ ಕೃತ್ಯದಿಂದ ಹೇಗೋ ತಪ್ಪಿಸಿಕೊಂಡ ಯುವತಿ, ತಕ್ಷಣವೇ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಮಾಹಿತಿ ಸಿಗುತ್ತಿದ್ದಂತೆ ತಲಘಟ್ಟಪುರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಯುವತಿಯನ್ನು ಆರೋಪಿಗಳಿಂದ ರಕ್ಷಿಸಿದ್ದಾರೆ. ಯುವತಿಯ ದೂರಿನನ್ವಯ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಮಶೇಖರ್ ಹಾಗೂ ಅಂಬರೀಶ್ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.




