‘ಫೌಜಿ’ ರಿಲೀಸ್ ಡೇಟ್ ಫಿಕ್ಸ್ – ಪ್ರಭಾಸ್ ಫ್ಯಾನ್ಸ್ ಖುಷ್!
'Fauji' release date fixed – Prabhas fans delighted!

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಖ್ಯಾತ ನಿರ್ದೇಶಕ ಹನು ರಾಘವಪುಡಿ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಫೌಜಿ’. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದ್ದು, ಡಿಸೆಂಬರ್ 3 ರಂದು ಸಿನಿಮಾ ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
‘ಬಾಹುಬಲಿ’ ನಂತರ ಪ್ರಭಾಸ್ ಮತ್ತೊಮ್ಮೆ ಒಂದು ಬೃಹತ್ ಪೀರಿಯಡ್ ಡ್ರಾಮಾದೊಂದಿಗೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಪ್ರಭಾಸ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿದೆ. ಚಿತ್ರದ ಬಿಡುಗಡೆ ದಿನಾಂಕದೊಂದಿಗೆ ಹೊಸ ಪೋಸ್ಟರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಸ್ಟರ್ನಲ್ಲಿ ಪ್ರಭಾಸ್ ಪಂಚೆ ಕಟ್ಟಿಕೊಂಡು ಮದುವೆ ವರನ ಲುಕ್ನಲ್ಲಿದ್ದಾರೆ. ಕೈಯಲ್ಲಿ ಬಂದೂಕು ಹಿಡಿದುಕೊಂಡು ಕುಳಿತಿದ್ದಾರೆ. ಅವರ ದೇಹವೆಲ್ಲ ರಕ್ತದಿಂದ ಒದ್ದೆಯಾಗಿದೆ. ಹಲವಾರು ಶವಗಳು ಅವರ ಹಿನ್ನೆಲೆಯಲ್ಲಿವೆ. ‘ಬಟಾಲಿಯನ್ ಹೂ ಫೈಟ್ಸ್ ಅಲೋನ್’ ಎಂಬ ಟ್ಯಾಗ್ ಲೈನ್ ಪೋಸ್ಟರ್ನಲ್ಲಿದೆ. ಸಿನಿಮಾ ಡಿಸೆಂಬರ್ 3 ರಂದು ಬಿಡುಗಡೆ ಆಗಲಿದೆ.
‘ಸೀತಾ ರಾಮಂ’ ನಂತಹ ಕಲ್ಟ್ ಕ್ಲಾಸಿಕ್ ಚಿತ್ರವನ್ನು ನೀಡಿದ ಹನು ರಾಘವಪುಡಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಸೀತಾ ರಾಮಂ’ ನಲ್ಲಿ ಸೈನಿಕನ ಪ್ರೇಮಕಥೆಯನ್ನು ಅದ್ಭುತವಾಗಿ ತೆರೆಗೆ ತಂದಿದ್ದ ಅವರು, ಈ ಬಾರಿ ‘ಫೌಜಿ’ಯಲ್ಲಿ ಪ್ರಭಾಸ್ ಅವರನ್ನು ಸೈನಿಕನ ಪಾತ್ರದಲ್ಲಿ ತೋರಿಸುತ್ತಿದ್ದಾರೆ.
ದಕ್ಷಿಣ ಭಾರತದ ಅತಿ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರವು, ಬಿಡುಗಡೆಗೂ ಮುನ್ನವೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ರಭಾಸ್ ಅವರ ಅಭಿಮಾನಿಗಳು ಡಿಸೆಂಬರ್ 3ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.




