bengaluru

ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್!

Delivery boy breaks into house under pretext of using toilet!

ಬೆಂಗಳೂರು : ಪಾರ್ಸೆಲ್ ನೀಡಲು ಬಂದ ಡೆಲಿವರಿ ಏಜೆಂಟ್ ಓರ್ವ, ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಯೊಬ್ಬರ ಮನೆಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ಈ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ. ಘಟನೆಯ ವಿವರದ ಪ್ರಕಾರ, ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್ ಪಾರ್ಸೆಲ್ ತಲುಪಿಸಲು ಮಹಿಳೆಯ ಮನೆಗೆ ಬಂದಿದ್ದನು. ಈ ವೇಳೆ ತನಗೆ ತುರ್ತಾಗಿ ಶೌಚಾಲಯದ ಅವಶ್ಯಕತೆಯಿದೆ ಎಂದು ಮಹಿಳೆಯನ್ನು ಕೇಳಿದ್ದಾನೆ.

ಆದರೆ, ಅಪರಿಚಿತ ವ್ಯಕ್ತಿಯೊಬ್ಬರನ್ನು ಮನೆಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಮಹಿಳೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಒಂದು ವೇಳೆ ತುರ್ತು ಪರಿಸ್ಥಿತಿ ಇದ್ದರೆ, ಪಕ್ಕದ ಮನೆಯಲ್ಲಿರುವ ಪುರುಷರ ಸಹಾಯ ಪಡೆಯುವಂತೆ ಆತನಿಗೆ ಸಲಹೆ ನೀಡಿದ್ದಾರೆ. ಮಹಿಳೆಯ ಮಾತನ್ನು ನಿರ್ಲಕ್ಷಿಸಿದ ಆತ, ಯಾವುದೇ ಅನುಮತಿಯಿಲ್ಲದೆ ಬಲವಂತವಾಗಿ ಫ್ಲಾಟ್ ಒಳಗೆ ನುಗ್ಗಿದ್ದಾನೆ. ಮಹಿಳೆಯ ವಿರೋಧವನ್ನೂ ಲೆಕ್ಕಿಸದೆ ಶೌಚಾಲಯಕ್ಕೆ ತೆರಳಿದ್ದಾನೆ. ಬಳಿಕ ಶೌಚಾಲಯದಿಂದ ಹೊರಬಂದ ಆತ, ಮಹಿಳೆಯ ಎದುರು ಅಸಭ್ಯವಾಗಿ ವರ್ತಿಸಿದ್ದಾನೆ.

ಮಹಿಳೆ ಆತನ ಕೃತ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಆತನನ್ನು ಪ್ರಶ್ನಿಸಿ, ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಗಾಬರಿಗೊಂಡ ಆತ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button