ಬೆಂಗಳೂರಲ್ಲಿ ವರುಣನ ಆರ್ಭಟ – ಮರ ಬಿದ್ದು ವಾಹನಗಳು ಜಖಂ!
Torrential rain in Bengaluru – Vehicles damaged by falling tree!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ನಿನ್ನೆ ರಾತ್ರಿಯಿಂದಲೇ ಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿ 10 ಗಂಟೆಯಿಂದಲೇ ಆರಂಭವಾದ ಜಿಟಿಜಿಟಿ ಮಳೆ, ಇಂದು ಬೆಳಗ್ಗೆಯೂ ನಿರಂತರವಾಗಿ ಮುಂದುವರಿದಿದೆ.
ನಗರದ ಪ್ರಮುಖ ಪ್ರದೇಶಗಳಾದ ಮೆಜೆಸ್ಟಿಕ್, ಯಶವಂತಪುರ, ದಾಸರಹಳ್ಳಿ, ರಾಜಾಜಿನಗರ, ಮಲ್ಲೇಶ್ವರಂ, ಕೆ.ಆರ್. ಮಾರ್ಕೆಟ್ ಹಾಗೂ ರಾಜರಾಜೇಶ್ವರಿ ನಗರ (RR ನಗರ) ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆಯಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಹಾಗೂ ದಾರಿಹೋಕರು ತೀವ್ರ ಪರದಾಟ ಅನುಭವಿಸುವಂತಾಗಿದೆ.
ಭಾರೀ ಮಳೆಯ ಅಬ್ಬರಕ್ಕೆ ನಗರದ ಕೆಲವು ಕಡೆಗಳಲ್ಲಿ ಬೃಹತ್ ಮರಗಳು ಧರೆಗೆ ಉರುಳಿವೆ. ಮಲ್ಲೇಶ್ವರಂನ ಸ್ಮಾರ್ಟ್ ಬಜಾರ್ ಮುಂಭಾಗ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಆ ಸಮಯದಲ್ಲಿ ಮರದ ಕೆಳಗೆ ನಿಲ್ಲಿಸಲಾಗಿದ್ದ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ.
ಮರ ಬಿದ್ದ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಘಟನೆ ಸಂಭವಿಸಿದ ಸಮಯದಲ್ಲಿ ಯಾರೂ ವಾಹನದ ಒಳಗೆ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸವಾರರು ಹಾಗೂ ಸ್ಥಳೀಯರು ಕೂದಲೆಳೆಯ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.




