keralaರಾಜ್ಯ

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಕೇರಳ ಸಿಎಂ!

Kerala CM visits Kollur Mookambika!

ಕೊಲ್ಲೂರು : ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಇಂದು ಮುಂಜಾನೆ ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ಕೇರಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೊಲ್ಲೂರು ಕ್ಷೇತ್ರಕ್ಕೆ ಸತೀಶನ್ ಅವರು ಮೊದಲ ಬಾರಿ ಭೇಟಿ ನೀಡಿದ್ದಾರೆ. ಅವರು ಕೊಲ್ಲೂರು ಮೂಕಾಂಬಿಕೆಯ ಅಪಾರ ಭಕ್ತರಾಗಿದ್ದು, ಇಂದು ಮುಂಜಾನೆಯೇ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಹಾಗೂ ಅರ್ಚನೆಗಳನ್ನು ಸಲ್ಲಿಸಿ ಆಶೀರ್ವಾದ ಪಡೆದರು.

ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅತ್ಯಂತ ಉನ್ನತ ಮಟ್ಟದ ಜಡ್-ಪ್ಲಸ್ (Z+) ಕೆಟಗರಿ ಭದ್ರತೆಯೊಂದಿಗೆ ಸತೀಶನ್ ಅವರು ದೇವಸ್ಥಾನಕ್ಕೆ ಆಗಮಿಸಿದ್ದರು. ಸಿಎಂ ಭೇಟಿಯ ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

ದೇವಿಯ ದರ್ಶನ ಹಾಗೂ ಪೂಜಾ ಕಾರ್ಯಕ್ರಮಗಳ ನಂತರ, ಕೊಲ್ಲೂರು ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪನಾ ಸಮಿತಿ ಮತ್ತು ಆಡಳಿತ ಮಂಡಳಿಯ ವತಿಯಿಂದ ಕೇರಳ ಮುಖ್ಯಮಂತ್ರಿಗಳನ್ನು ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಪೂರ್ವಕವಾಗಿ ಸತ್ಕರಿಸಲಾಯಿತು.

ಕೊಲ್ಲೂರು ಕ್ಷೇತ್ರದಲ್ಲಿ ಪೂಜೆ ಮುಗಿಸಿದ ಬಳಿಕ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ರಸ್ತೆ ಮಾರ್ಗವಾಗಿ ಮಂಗಳೂರಿಗೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

Comments (0)

Your email address will not be published. Required fields are marked *

Back to top button