
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಚುನಾವಣೆ ನಡೆಸಲು ಅಧಿಕೃತವಾಗಿ ಪ್ರಕಟಣೆ ನೀಡಿದ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಹಾಗೂ ತೀವ್ರ ಜಟಾಪಟಿ ಶುರುವಾಗಿದೆ.“ಅತ್ತ ನಾನು ಹಿರಿಯ ನನಗೇ ಕೊಡಬೇಕು ಇತ್ತ ನನಗೆ ಅವಕಾಶ ಕೊಡಿ” ಎಂದು ಹಿರಿಯ-ಕಿರಿಯ ನಾಯಕರು ಹೈಕಮಾಂಡ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ದೆಹಲಿಯಲ್ಲಿ ರಾಜ್ಯಸಭೆಗೆ ತೀವ್ರ ಹಗ್ಗಜಗ್ಗಾಟ ಆರಂಭವಾಗಿದೆ.

ಸಂಖ್ಯಾಬಲ-ಕಾಂಗ್ರೆಸ್‌ಗೆ 3 ಸ್ಥಾನ!
ರಾಜ್ಯ ವಿಧಾನಸಭೆಯ ಸದ್ಯದ ಸಂಖ್ಯಾಬಲದ ಆಧಾರದ ಮೇಲೆ, ಖಾಲಿಯಾಗಲಿರುವ ಒಟ್ಟು 4 ಸ್ಥಾನಗಳ ಪೈಕಿ 3 ಸ್ಥಾನಗಳು ನಿರಾಯಾಸವಾಗಿ ಕಾಂಗ್ರೆಸ್ ಪಾಲಾಗಲಿವೆ. ಹೀಗಾಗಿಯೇ ಕೈ ಪಾಳಯದಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಪ್ರಭಾವಿ ನಾಯಕರು ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ.ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಗಿಯುತ್ತಿರುವುದರಿಂದ ತೆರವಾಗಲಿರುವ ಸ್ಥಾನಕ್ಕೆ ಅವರನ್ನೇ ಮರು ಆಯ್ಕೆ ಮಾಡಲು ರಾಹುಲ್ ಗಾಂಧಿ ನೇತೃತ್ವದ ಹೈಕಮಾಂಡ್ ತೀರ್ಮಾನಿಸಿದೆ.ಆದರೆ,ಅವರ ವಯಸ್ಸು ಹಾಗೂ ಮುಂಬರುವ ರಾಜಕೀಯ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಮರು ಆಯ್ಕೆಯಾಗುವ ಬಗ್ಗೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಗೊಂದಲದಲ್ಲಿದ್ದಾರೆ ಎನ್ನಲಾಗಿದೆ.ಒಂದು ಸ್ಥಾನವಂತೂ ಖರ್ಗೆಗೆ ಫಿಕ್ಸ ಅಗಿದ್ದು, ಒಂದು ವೇಳೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಈ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ದಾರಿ ಯಾವುದಯ್ಯಾ 2 ಸೀಟುಗಳಿಗೆ!
ಖರ್ಗೆ ಅವರ ಸ್ಥಾನವನ್ನು ಹೊರತುಪಡಿಸಿ ಇನ್ನುಳಿದ 2 ಸೀಟುಗಳಿಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ನಾಯಕರ ನಡುವೆ ದೊಡ್ಡ ವಾರ್ ಶುರುವಾಗಿದೆ.
ಮುನ್ನೆಲೆಯಲ್ಲಿರುವ ಪ್ರಮುಖರು ಮತ್ತು ಒತ್ತಡಗಳು
| ಆಕಾಂಕ್ಷಿಗಳ ಹೆಸರು | ರಾಜಕೀಯ ಹಿನ್ನೆಲೆ / ಸ್ಥಾನಮಾನ | ಟಿಕೆಟ್‌ಗಾಗಿ ಇರುವ ಪ್ರಬಲ ಕಾರಣ / ಕೋಟಾ |
| ಡಿ.ಕೆ. ಸುರೇಶ್ | ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು | ರಾಜ್ಯಸಭೆಗೆ ಕಳುಹಿಸಲು ಕೆಪಿಸಿಸಿ ಮಟ್ಟದಲ್ಲಿ ಭಾರಿ ಒತ್ತಡ. |
| ಡಾ. ಅಂಜಲಿ ನಿಂಬಾಳ್ಕರ್ | ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ | ಮಹಿಳಾ ಕೋಟಾದ ಪ್ರಬಲ ಆಕಾಂಕ್ಷಿ |
| ಮನ್ಸೂರ್ ಅಲಿ ಖಾನ್ | ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಪುತ್ರ | ಅಲ್ಪಸಂಖ್ಯಾತ ಕೋಟಾದಡಿ ಅವಕಾಶ ನೀಡಬೇಕೆಂದು ಪಟ್ಟು |
| ಮೋಹನ್ ಕಾತರಕಿ | ಸುಪ್ರೀಂಕೋರ್ಟ್ನ ಖ್ಯಾತ ಹಿರಿಯ ವಕೀಲರು | ಕಾವೇರಿ-ಕೃಷ್ಣಾ ನದಿ ನೀರು ಹಂಚಿಕೆ ವಿವಾದಗಳಲ್ಲಿ ಕರ್ನಾಟಕದ ಪರ ಸುದೀರ್ಘ ವಾದ ಮಂಡಿಸಿರುವ ನಿಪುಣ |
| ಬಿ.ವಿ. ಶ್ರೀನಿವಾಸ್ | ಯೂತ್ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ | ಯುವ ನಾಯಕತ್ವದ ಕೋಟಾದಡಿ ಹೈಕಮಾಂಡ್ ಮೇಲೆ ಒತ್ತಡ |
ರಾಷ್ಟ್ರೀಯ ನಾಯಕರ ಕಣ್ಣು: ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೆರಾ ಮತ್ತು ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಅವರು ಸಹ ಕರ್ನಾಟಕದಿಂದಲೇ ರಾಜ್ಯಸಭೆ ಪ್ರವೇಶಿಸಲು ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕೈ ನಾಯಕರಲ್ಲಿ ಶುರುವಾಗಿರುವ ಈ ಟಿಕೆಟ್ ತಿಕ್ಕಾಟ ಸದ್ಯದಲ್ಲೇ ದೆಹಲಿ ತಲುಪಲಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದುನೋಡಬೇಕಿದೆ.
#FreedomTV #RajyaSabhaElections2026 #KarnatakaCongress #MallikarjunKharge #DKSuresh #AnjaliNimbalkar #PawanKhera #SupriyaShrinate #BVSrinivas #KarnatakaPolitics #DelhiLobby



