ರಾಜ್ಯ

ಮೃತ ಭುವನಾ ಕುಟುಂಬಕ್ಕೆ 1 ಕೋಟಿ ವಿಮೆ, ಒಬ್ಬರಿಗೆ ಸರ್ಕಾರಿ ಕೆಲಸ – ಡಿಸಿಎಂ ಪರಮೇಶ್ವರ್ ಭರವಸೆ!

1 crore insurance for the family of deceased Bhuvana, government job for one - DCM Parameshwara promises!

ತುಮಕೂರು : SIR ಕರ್ತವ್ಯಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿ ಸಾವನ್ನಪ್ಪಿದ್ದ ವಿಎ ಭುವನಾ ಕುಟುಂಬಕ್ಕೆ ರಾಜ್ಯ ಸರ್ಕಾರ ಭರವಸೆಯ ಹಸ್ತ ಚಾಚಿದೆ. ಭುವನಾ ಕುಟುಂಬಕ್ಕೆ 15 ದಿನಗಳಲ್ಲಿ 1 ಕೋಟಿ ವಿಮೆ ಹಣ ಬಿಡುಗಡೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.

ಮೃತ ಭುವನಾ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಾ. ಜಿ. ಪರಮೇಶ್ವರ್, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಭುವನಾ ಕುಟುಂಬಕ್ಕೆ ವಿಮೆ ಪರಿಹಾರವಾಗಿ 1 ಕೋಟಿ ಮೊತ್ತವನ್ನು ಮುಂದಿನ 15 ದಿನಗಳ ಒಳಗಾಗಿ ಬಿಡುಗಡೆ ಮಾಡಲಾಗುವುದು. ಅಲ್ಲದೆ ಟುಂಬದಲ್ಲಿ ಒಬ್ಬರಿಗೆ ಸರ್ಕಾರ ಉದ್ಯೋಗ ಕೊಡುತ್ತೇವೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ. ಮಂಜೂರು ಮಾಡಿಸುತ್ತೇವೆ ಎಂದಿದ್ದಾರೆ.

ಈ ವೇಳೆ ಡಿಸಿಎಂ ಡಾ. ಜಿ. ಪರಮೇಶ್ವರ್ ಮಾತನಾಡಿ, “ಇದು ಕರ್ತವ್ಯದಲ್ಲಿದ್ದಾಗ ಸಂಭವಿಸಿದ ದುರ್ಘಟನೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಸಿಗಬೇಕಾದ ಎಲ್ಲಾ ನೆರವನ್ನೂ ಒದಗಿಸುತ್ತೇವೆ. ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಸಹ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಏನಿದು ಘಟನೆ?

ತುಮಕೂರು ತಾಲೂಕಿನ ಹುಲ್ಲೇನಹಳ್ಳಿಯ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಟಿ. ಬೇಗೂರು ನಿವಾಸಿ ಭುವನಾ, ಶನಿವಾರ ಬೆಳಿಗ್ಗೆ ಎಸ್‌ಐಆರ್ ಪ್ರಕ್ರಿಯೆಯ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಹೀಗಾಗಿ ತುಮಕೂರು ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಗೂಳೂರಿನ ನಾಡಕಚೇರಿಗೆ ಹೊರಟಿದ್ದರು.

ಬೆಳಗ್ಗೆ ಕುಣಿಗಲ್ ರಸ್ತೆಯ ಗೂಳೂರು ಬಳಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಲಾರಿಯೊಂದು ಅವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭುವನಾ ಅವರು ಹೆಲ್ಮೆಟ್ ಧರಿಸಿದ್ದರೂ, ಡಿಕ್ಕಿಯ ರಭಸಕ್ಕೆ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಅವರು ಮೃತಪಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button