ರಾಜ್ಯ

ರಾಜ್ಯದಲ್ಲಿ ಇಂದಿನಿಂದ SIR ಆರಂಭ – 5 ಕೋಟಿಗೂ ಹೆಚ್ಚು ಮತದಾರರ ಪರಿಷ್ಕರಣೆ!

ಬೆಂಗಳೂರು : ಭಾರತ ಚುನಾವಣಾ ಆಯೋಗದ ಮಹತ್ವದ ನಿರ್ದೇಶನದಂತೆ ರಾಜ್ಯಾದ್ಯಂತ ಇಂದಿನಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR – Special Intensive Revision) ಪ್ರಕ್ರಿಯೆ ಆರಂಭವಾಗಿದೆ. ಇಂದಿನಿಂದ ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹ ಹಾಗೂ ಪರಿಶೀಲನೆ ನಡೆಸಲಿದ್ದಾರೆ.

ರಾಜ್ಯದಲ್ಲಿ ನಕಲಿ ಮತದಾರರನ್ನು ಪತ್ತೆಹಚ್ಚಿ, ಪಾರದರ್ಶಕ ಮತದಾರರ ಪಟ್ಟಿ ಸಿದ್ಧಪಡಿಸುವುದು ಈ ಬೃಹತ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ಪ್ರಾಥಮಿಕ ಹಂತದ ಮ್ಯಾಪಿಂಗ್ ಕಾರ್ಯ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ 91.61% ಮ್ಯಾಪಿಂಗ್ ಆಗಿದ್ದು, 5,54,32,314 ಮತದಾರರ ಪೈಕಿ 5,07,79,810 ಮತದಾರರ ಮ್ಯಾಪಿಂಗ್ ನಡೆದಿದೆ. ಇನ್ನುಳಿದ 46,52,504 ಮತದಾರರು ಮ್ಯಾಪಿಂಗ್ ಆಗಬೇಕಿದೆ. ಇನ್ನು ಮನೆ ಮನೆ ಭೇಟಿ ವೇಳೆ 5.55 ಕೋಟಿ ಮತದಾರರ ಪೈಕಿ ಅಸಲಿ ಯಾರು? ನಕಲಿ ಯಾರು? ಎನ್ನುವುದನ್ನು ಪರಿಶೀಲಿಸಲಾಗುತ್ತದೆ.

ಮನೆ ಮನೆ ಭೇಟಿ ವೇಳೆ ಏನೆಲ್ಲ ಪ್ರಕ್ರಿಯೆ ನಡೆಯಲಿದೆ?

ನಿಮ್ಮ ವೋಟರ್ ಐಡಿಯಲ್ಲಿ ಹೆಸರು, ವಿಳಾಸ ತಪ್ಪುಗಳಿದ್ದರೆ ಸೂಕ್ತ ತಿದ್ದುಪಡಿ ಮಾಡಲು, 18 ವರ್ಷ ತುಂಬಿದ ಹೊಸ ಮತದಾರರ ಹೆಸರು ಸೇರಿಸಲು ಹಾಗೂ ವಲಸೆ ಹೋದವರು ಅಥವಾ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಬಿಎಲ್‌ಒಗಳು ಮನೆಗೆ ಬಂದಾಗ ಎಸ್‌ಐಆರ್ (SIR) ಅರ್ಜಿಯನ್ನು ನೀಡಲಿದ್ದಾರೆ. ಸಾರ್ವಜನಿಕರು ಈ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಹಾಕಿ, ಅಗತ್ಯ ದಾಖಲೆಗಳಾದ ಕುಟುಂಬ ಸದಸ್ಯರ ಗುರುತಿನ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಬೇಕು. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿದ್ದರೆ ಅಥವಾ ವಂಶಾವಳಿ ಜೋಡಣೆಯಾಗದಿದ್ದರೆ ಅಂತಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

Comments (0)

Your email address will not be published. Required fields are marked *

Back to top button