ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೈಡ್ರಾಮಾ?

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾರ್ಚ್ 29ರ ತಡರಾತ್ರಿ ನಡೆದಿದ್ದ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವಿನ ಹೈಡ್ರಾಮಾ ತಡವಾಗಿ ಬೆಳಕಿಗೆ ಬಂದಿದೆ. ಜೈಲಿನಿಂದಲೇ ವಿಡಿಯೋ ಮಾಡಿ ಹೊರಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಿಚಾರಣಾ ಬಂಧಿಗಳ ವಿಭಾಗದ ಟವರ್-1ರಲ್ಲಿ ಅಧಿಕಾರಿಗಳು ತಪಾಸಣೆಗೆ ಮುಂದಾದಾಗ, ಇನಾಕ್ ಜಾಯ್ ಮತ್ತು ವೋಕು ಆರೆಂಜಿ ಸೇರಿದಂತೆ ಹಲವು ಕೈದಿಗಳು ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿ ತಪಾಸಣೆಗೆ ಅಡ್ಡಿಪಡಿಸಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಜೈಲು ಸಿಬ್ಬಂದಿ, ಅಶಿಸ್ತಿನ ಕೈದಿಗಳನ್ನು ಹತೋಟಿಗೆ ತರಲು ಮತ್ತು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ ಬ್ಯಾರಕ್ಗಳಲ್ಲಿ ಗುಪ್ತವಾಗಿ ಅಡಗಿಸಿಟ್ಟಿದ್ದ 10ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಕೈದಿಗಳ ವಿರುದ್ಧ ಈಗ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೈಲಿನ ಆಂತರಿಕ ಭದ್ರತೆಯ ಬಗ್ಗೆ ಮತ್ತೊಮ್ಮೆ ಆತಂಕ ವ್ಯಕ್ತವಾಗಿದೆ.




