ರಾಜ್ಯಸಭೆಗೆ ಸಿದ್ದರಾಮಯ್ಯ? ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ?

ಹೈಕಮಾಂಡ್ ‘ಮಾಸ್ಟರ್ ಪ್ಲ್ಯಾನ್’ ಬಿಚ್ಚಿಟ್ಟ ‘ಕೈ’ ಮೂಲಗಳು!
ಬೆಂಗಳೂರು/ನವದೆಹಲಿ : ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದ್ದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆಗೆ ಈಗ ದಿಲ್ಲಿ ಮಟ್ಟದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಿಲ್ಲಿ ರಾಜಕಾರಣಕ್ಕೆ ಕರೆಸಿಕೊಂಡು, ಆ ಮೂಲಕ ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಡಲು ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ರೋಡ್ಮ್ಯಾಪ್ ಸಿದ್ಧಪಡಿಸಿದೆ. ಕಾಂಗ್ರೆಸ್ನ ಅತ್ಯಂತ ವಿಶ್ವಾಸಾರ್ಹ ಮೂಲಗಳಿಂದ ಫ್ರೀಡಂ ಟಿವಿಗೆ ಸ್ಫೋಟಕ ಮಾಹಿತಿ ಬಂದಿದೆ.
2026ರ ಏಪ್ರಿಲ್ನಲ್ಲಿ ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳು ಖಾಲಿಯಾಗುತ್ತಿದ್ದು, ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ 3 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದು. ಈ 3 ಸ್ಥಾನಗಳಲ್ಲಿ ಒಂದನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿ, ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಸಂಸತ್ಗೆ ಕಳುಹಿಸುವುದು ಹೈಕಮಾಂಡ್ನ ‘ಒಮ್ಮತದ ನಿರ್ಧಾರ’ ಎನ್ನಲಾಗುತ್ತಿದೆ.

ಏನಿದು ‘ಕೈ’ಕಮಾಂಡ್ ‘ಮಾಸ್ಟರ್ ಸ್ಟ್ರೋಕ್’?
2028ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ವರಿಷ್ಠರು ಈ ದೊಡ್ಡ ಚದುರಂಗದಾಟಕ್ಕೆ ಕೈಹಾಕಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರ ವರ್ಚಸ್ಸನ್ನು ರಾಷ್ಟ್ರ ರಾಜಕಾರಣದಲ್ಲಿ ಬಳಸಿಕೊಳ್ಳುವುದು ಮತ್ತು ರಾಜ್ಯದಲ್ಲಿ ಭಿನ್ನಮತಕ್ಕೆ ಬ್ರೇಕ್ ಹಾಕಿ, ಮುಂಬರುವ ಚುನಾವಣೆಗೆ ಹೊಸ ಮುಖದ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸುವುದು ಇದರ ಹಿಂದಿರುವ ಅಸಲಿ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿ ಯಾರಿದ್ದಾರೆ?
ಸಿದ್ದರಾಮಯ್ಯ ಅವರು ದಿಲ್ಲಿ ರಾಜಕಾರಣಕ್ಕೆ ತೆರಳಿದರೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಸದ್ಯ ಇಬ್ಬರು ಪ್ರಬಲ ನಾಯಕರ ಹೆಸರು ಕೇಳಿ ಬರುತ್ತಿದೆ. ಆ ಪೈಕಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ್ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಡಿಕೆಶಿ ಅವರ ಪ್ಲಸ್ ಪಾಯಿಂಟ್ಸ್ ಏನೆಂದು ನೋಡುವುದಾದರೆ..ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ ಶ್ರಮ. ಒಕ್ಕಲಿಗ ಸಮುದಾಯದ ಬಲಿಷ್ಠ ಬೆಂಬಲ.ಕಳೆದ ಚುನಾವಣೆಯ ಗೆಲುವಿನ ಬಳಿಕ ನೀಡಿದ ‘ಅಧಿಕಾರ ಹಂಚಿಕೆ’ ಸೂತ್ರದ ಪ್ರಕಾರ ಡಿಕೆಶಿಗೆ ಮೊದಲ ಆದ್ಯತೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಡಾ.ಜಿ.ಪರಮೇಶ್ವರ್ ಅವರ ಪ್ಲಸ್ ಪಾಯಿಂಟ್ಸ್ ನೋಡೋದಾದರೆ.. ಹಿರಿಯ ದಲಿತ ನಾಯಕ. ಹೈಕಮಾಂಡ್ ವರಿಷ್ಠರಿಗೆ ಅತ್ಯಂತ ಆಪ್ತರು. ಆಡಳಿತಾತ್ಮಕವಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದಿರುವುದು ಪರಮೇಶ್ವರ್ ಅವರ ವರ್ಚಸ್ಸಾಗಿದೆ. ಆದರೆ, ಅಂತಿಮವಾಗಿ ಹೈಕಮಾಂಡ್ ಯಾರಿಗೆ ಅವಕಾಶ ಕೊಡಲಿದೆ ಎಂದುದೇ ಸದ್ಯದ ಪ್ರಶ್ನೆ.




