#Exclusive NewsTop News

‘ಬ್ರ್ಯಾಂಡ್ ಬೆಂಗಳೂರು’ ವರ್ಸಸ್ ‘ಬರಿದಾದ ಕೃಷಿ’ – ಡಿಕೆಶಿಗೆ ‘ಕೃಷ್ಣ ಟ್ರ್ಯಾಪ್’ ಆತಂಕ!

ರಾಜ್ಯದಲ್ಲಿ ಭೀಕರ ಬರಗಾಲದ ಆತಂಕ ಶುರುವಾಗಿದೆ. ಹಲವು ತಾಲೂಕುಗಳಲ್ಲಿ ಶೇಕಡಾ 60ಕ್ಕೂ ಹೆಚ್ಚು ಮಳೆ ಕೊರತೆ ದಾಖಲಾಗಿದೆ. ಸದ್ಯಕ್ಕೆ ಬಿತ್ತನೆ ಕಾರ್ಯ ತಡೆಹಿಡಿಯಲು ಮತ್ತು ಡ್ಯಾಂ ನೀರನ್ನು ಕೇವಲ ಕುಡಿಯಲು ಬಳಸಲು ಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

ಜೂನ್ 1ರಿಂದ ಜುಲೈ 18ರವರೆಗಿನ ವರದಿಯಂತೆ ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ 67% ಮಳೆ ಅಭಾವ ಕಂಡುಬಂದಿದೆ. ಮೈಸೂರಿನಲ್ಲಿ 56% ಹಾಗೂ ದಾವಣಗೆರೆಯಲ್ಲಿ 53% ಕೊರತೆಯಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಬೆಳಗಾವಿ (233 ಮಿ.ಮೀ) ಹಾಗೂ ಬೆಂಗಳೂರು ಗ್ರಾಮಾಂತರ (98 ಮಿ.ಮೀ) ಭಾಗದಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ಇದು 1999-2004ರ ಕರಾಳ ಇತಿಹಾಸವನ್ನು ಮರುಕಳಿಸುತ್ತಿದೆ. ಅಂದು ಎಸ್.ಎಂ. ಕೃಷ್ಣ ಬೆಂಗಳೂರನ್ನು ಗ್ಲೋಬಲ್ ಟೆಕ್ ಹಬ್ ಮಾಡಿದರೂ, ‘ಸೂಟ್-ಬೂಟ್’ ಸಿಎಂ ಎಂದು ವಿರೋಧಿಗಳು ಹಣೆಪಟ್ಟಿ ಕಟ್ಟಿದ್ದರು. ಪರಿಣಾಮ 2004ರಲ್ಲಿ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾರಿ ಹಿನ್ನಡೆ ಅನುಭವಿಸಿತ್ತು.

ತಮ್ಮ ರಾಜಕೀಯ ಗುರು ಕೃಷ್ಣ ಅವರ ಹಾದಿಯಲ್ಲೇ ಸಾಗುತ್ತಿರುವ ಡಿಕೆಶಿಗೆ ಈಗ ಅದೇ ಸವಾಲು ಎದುರಾಗಿದೆ. ಒಂದೆಡೆ ಬೆಂಗಳೂರಿಗೆ ಮೆಗಾ ಪ್ರಾಜೆಕ್ಟ್, ಇನ್ನೊಂದೆಡೆ ಗ್ರಾಮೀಣ ಭಾಗದ ಆಕ್ರೋಶ ನಿರ್ವಹಿಸಬೇಕಾದ ಧರ್ಮಸಂಕಟ ಅವರದ್ದಾಗಿದೆ.

ಮುಂದಿನ ಎರಡು ತಿಂಗಳಲ್ಲಿ ಮಳೆ ಬಾರಿದ್ದರೆ ಡಿಕೆಶಿ ಅವರ ಆಡಳಿತ ವೈಖರಿಗೆ ದೊಡ್ಡ ಪರೀಕ್ಷೆ ಎದುರಾಗುವುದು ಖಚಿತ.

Comments (0)

Your email address will not be published. Required fields are marked *

Back to top button