ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ!
Former Prime Minister H.D. Deve Gowda's wife Chennamma passes away!

ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಂಜೆ 4.45 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಚೆನ್ನಮ್ಮ ಉಸಿರಾಟದ ಸಮಸ್ಯೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯ ಡಾ.ಸತ್ಯನಾರಾಯಣ ಅವರು ಚನ್ನಮ್ಮನವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ.
1937 ರಲ್ಲಿ ಜನಿಸಿದ್ದ ಚೆನ್ನಮ್ಮ ಅವರು 1954 ಮೇ 25ರಂದು ಹೆಚ್.ಡಿ.ದೇವೇಗೌಡ ಅವರ ಕೈಹಿಡಿದರು. ನಂತರ ಹೆಚ್.ಡಿ.ದೇವೇಗೌಡ ಅವರ ಏಳುಬೀಳುಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಸದಾ ನೆರಳಾಗಿ ನಿಂತಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ದೇಶದಾದ್ಯಂತ ರಾಜಕೀಯವಾಗಿ ಸಕ್ರಿಯರಾಗಿದ್ದಾಗ, ಇಡೀ ಕುಟುಂಬವನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದ ಕೀರ್ತಿ ಚೆನ್ನಮ್ಮ ಅವರಿಗೆ ಸಲ್ಲುತ್ತದೆ. ಸುಮಾರು 7 ದಶಕಗಳ ಕಾಲ ದೇವೇಗೌಡರ ಹೆಜ್ಜೆಗೆ ಹೆಜ್ಜೆಯಿಟ್ಟು, ಇಡೀ ಗೌಡರ ಕುಟುಂಬದ ಶಕ್ತಿಯಾಗಿ ಅವರು ಗುರುತಿಸಿಕೊಂಡಿದ್ದರು.
ಚೆನ್ನಮ್ಮ ಅವರು ಪತಿ ಹೆಚ್.ಡಿ.ದೇವೇಗೌಡ, ನಾಲ್ವರು ಗಂಡು ಮಕ್ಕಳು (ಹೆಚ್.ಡಿ.ಬಾಲಕೃಷ್ಣ, ಹೆಚ್.ಡಿ.ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರಮೇಶ್), ಇಬ್ಬರು ಹೆಣ್ಣುಮಕ್ಕಳು (ಅನಸೂಯ, ಶೈಲಜಾ) ಹಾಗೂ ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.




