bengaluruರಾಜ್ಯಸುದ್ದಿ

ಬೆಕ್ಕು ಮರಿಗಳ ಪೋಷಣೆಗಾಗಿ ಮಾಲೀಕರ ಕಿತ್ತಾಟ: ಶೇಷಾದ್ರಿಪುರಂ ಪೊಲೀಸರಿಗೆ ಫಜೀತಿ

ಬೆಂಗಳೂರು: ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಕ್ಕುಗಳ ಪ್ರಣಯ ಮತ್ತು ಮರಿಗಳ ಪೋಷಣೆಯ ವಿಚಾರವಾಗಿ ಮಾಲೀಕರ ನಡುವೆ ನಡೆದ ಜಗಳ ಪೊಲೀಸರನ್ನು ಫಜೀತಿಗೆ ಸಿಲುಕಿಸಿದ ವಿಚಿತ್ರ ಘಟನೆ ನಡೆದಿದೆ. ಶೇಷಾದ್ರಿಪುರಂನ ಅಪಾರ್ಟ್‌ಮೆಂಟ್ ಒಂದರಲ್ಲಿ ಅಕ್ಕಪಕ್ಕದ ಮನೆಯವರು ಸಾಕಿದ್ದ ಹೆಣ್ಣು ಮತ್ತು ಗಂಡು ಬೆಕ್ಕುಗಳ ನಡುವೆ ಉಂಟಾದ ಸಂಬಂಧದಿಂದಾಗಿ ನಾಲ್ಕು ಮರಿಗಳು ಜನಿಸಿದ್ದವು. ಈ ಮರಿಗಳನ್ನು ಯಾರು ಪೋಷಿಸಬೇಕು ಎಂಬ ವಿಚಾರದಲ್ಲಿ ಎರಡೂ ಮನೆಯವರ ನಡುವೆ ಸಂಘರ್ಷ ಆರಂಭವಾಗಿತ್ತು.

ಹೆಣ್ಣು ಬೆಕ್ಕಿನ ಮಾಲೀಕರು, ಮರಿಗಳು ನಿಮ್ಮ ಗಂಡು ಬೆಕ್ಕಿನಿಂದಲೇ ಹುಟ್ಟಿರುವುದರಿಂದ ಅವುಗಳ ಪೋಷಣೆಯ ಜವಾಬ್ದಾರಿ ನಿಮ್ಮದೇ ಎಂದು ವಾದಿಸಿದರೆ, ಗಂಡು ಬೆಕ್ಕಿನ ಮಾಲೀಕರು ಇದನ್ನು ಒಪ್ಪದೆ ತಮಗೂ ಮರಿಗಳಿಗೂ ಸಂಬಂಧವಿಲ್ಲ ಎಂದು ಪ್ರತಿವಾದ ಹೂಡಿದ್ದರು. ಈ ಜಗಳ ವಿಕೋಪಕ್ಕೆ ತಿರುಗಿ ಹೆಣ್ಣು ಬೆಕ್ಕಿನ ಮಾಲೀಕರು ನಾಲ್ಕು ಮರಿಗಳನ್ನು ನೆರೆಯವರ ಮನೆಯಲ್ಲಿ ಬಿಟ್ಟು ಬಂದಾಗ, ಪರಿಸ್ಥಿತಿ ಗಂಭೀರವಾಗಿ ಗಂಡು ಬೆಕ್ಕಿನ ಮಾಲೀಕರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡಿದ್ದರು.

ತುರ್ತು ಕರೆ ಎಂದು ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರಿಗೆ ಅಲ್ಲಿನ ಜಗಳದ ಅಸಲಿ ಕಾರಣ ತಿಳಿದಾಗ ದಿಕ್ಕೇ ತೋಚದಂತಾಯಿತು. ಬೆಕ್ಕುಗಳ ವಾರಸುದಾರಿಕೆ ಕುರಿತಾದ ಈ ವಿಚಿತ್ರ ವಿವಾದವನ್ನು ಬಗೆಹರಿಸಲು ಪೊಲೀಸರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಎರಡೂ ಕುಟುಂಬಗಳ ಮನವೊಲಿಸಲು ಹರಸಾಹಸ ಪಟ್ಟರು. ಅಂತಿಮವಾಗಿ, ಸ್ಥಳೀಯರೇ ಆ ನಾಲ್ಕು ಮರಿಗಳನ್ನು ಪೋಷಿಸಲು ಮುಂದೆ ಬಂದಿದ್ದರಿಂದ ಜಗಳ ಸುಖಾಂತ್ಯ ಕಂಡಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button