ಬಹುನಿರೀಕ್ಷಿತ ‘ರಾಮಾಯಣ’ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!
Date fixed for the release of the highly anticipated ‘Ramayana’ trailer!

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಮಹಾಕಾವ್ಯ ಆಧಾರಿತ ಸಿನಿಮಾದ ಟ್ರೇಲರ್ ಇದೇ ಜುಲೈ 24ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಶ್ರೀರಾಮನಾಗಿ, ದಕ್ಷಿಣ ಭಾರತದ ಹೆಮ್ಮೆಯ ನಟಿ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸ್ಯಾಂಡಲ್‌ವುಡ್‌ನ ‘ರಾಕಿಂಗ್ ಸ್ಟಾರ್’ ಯಶ್ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಈ ಬಿಗ್ ಬಜೆಟ್ ಸಿನಿಮಾವನ್ನು ಒಟ್ಟು ಎರಡು ಭಾಗಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಈಗ ಬಿಡುಗಡೆಯಾಗಲಿರುವ ಟ್ರೇಲರ್‌ನಲ್ಲಿ ಮುಖ್ಯ ಪಾತ್ರಗಳು, ರಾಮಾಯಣ ಮಹಾಕಾವ್ಯವನ್ನು ಬೆಳ್ಳಿಪರದೆಯ ಮೇಲೆ ಎಷ್ಟು ಅದ್ಭುತವಾಗಿ ತರಲಿದ್ದಾರೆ ಎಂಬುದನ್ನು ತೋರಿಸುವ ನಿರೀಕ್ಷೆಯಿದೆ. ರಾಮಾಯಣದ ಮೂಲ ಭಾವನೆಗಳಿಗೆ ಧಕ್ಕೆ ಬಾರದಂತೆ, ಅತ್ಯಾಧುನಿಕ ಗ್ರಾಫಿಕ್ಸ್ ಬಳಸಿ ಈ ಕಥೆಯನ್ನು ಬೆಳ್ಳಿಪರದೆಯ ಮೇಲೆ ತರಲಾಗುತ್ತಿದೆ.
ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಆಸ್ಕರ್ ಪ್ರಶಸ್ತಿ ವಿಜೇತ ಪ್ರಸಿದ್ಧ ವಿಎಫ್‌ಎಕ್ಸ್ ಸಂಸ್ಥೆ DNEG ಮತ್ತು ರಾಕಿಂಗ್ ಸ್ಟಾರ್ ಯಶ್ ಒಡೆತನದ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಅತ್ಯಂತ ಪ್ರೆಸ್ಟಿಜಿಯಸ್ ಆಗಿ ನಿರ್ಮಾಣ ಮಾಡುತ್ತಿವೆ. ಈ ಸಿನಿಮಾದ ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.




