
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಪರೇಷನ್ ಫುಟ್ಪಾತ್ ಮುಂದುವರೆದಿದೆ. ಕಳೆದ ಕೆಲವು ದಿನಗಳಿಂದ ನಿತಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಿ ಫುಟ್ಪಾತ್ ಒತ್ತುವರಿ ಮಾಡಿಕೊಂಡಿರುವ ಅಂಗಡಿ-ಮುಂಗಟ್ಟುಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತಿದೆ.
ಈಗಾಗಲೇ 350 ಕಿ. ಮೀಟರ್ವರೆಗೂ ಫುಟ್ಪಾತ್ ಕ್ಲಿಯರ್ ಮಾಡಲಾಗಿದೆ. ಫುಟ್ ಪಾತ್ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿ ಬದಿ ವ್ಯಾಪಾರಸ್ಥರು ಹೋರಾಟ ನಡೆಸಿದ್ದಾರೆ. ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
ವ್ಯಾಪಾರಿಗಳ ವಿರೋಧದ ಮಧ್ಯೆಯೂ GBA ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದೆ. ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದ ವಾಣಿಜ್ಯ ಮಳಿಗೆಗಳ ಬೋರ್ಡ್ಗಳು, ಅಕ್ರಮ ನಿರ್ಮಾಣಗಳು ಹಾಗೂ ವಾಹನ ನಿಲ್ದಾಣಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿಯೂ ಈ ಕಾರ್ಯಾಚರಣೆ ನಗರದ ಮೂಲೆ ಮೂಲೆಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ.




