
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಈಗ ಉಪಮುಖ್ಯಮಂತ್ರಿ (DCM) ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ಬಾರಿ ಡಿಸಿಎಂ ಹುದ್ದೆ ನೀಡಲೇಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಜಧಾನಿ ಬೆಂಗಳೂರಿನ ಟೌನ್‌ಹಾಲ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು “ಸಮರ್ಥ ಆಡಳಿತಗಾರ ಪ್ರಿಯಾಂಕ್ ಖರ್ಗೆ” ಎಂದು ಘೋಷಣೆಗಳನ್ನು ಕೂಗುವ ಮೂಲಕ, ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

“ದಲಿತ ಕೋಟಾ ಬೇಡ, ಸಾಧನೆ ನೋಡಿ ನೀಡಿ”
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡರು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಪಕ್ಷಕ್ಕಾಗಿ ನಿರಂತರವಾಗಿ ದುಡಿದಿದ್ದಾರೆ. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ.ನಾವು ಪ್ರಿಯಾಂಕ್ ಖರ್ಗೆ ಅವರಿಗೆ ದಲಿತ ಕೋಟಾದ ಅಡಿಯಲ್ಲಿ ಡಿಸಿಎಂ ಸ್ಥಾನ ನೀಡಿ ಎಂದು ಕೇಳುತ್ತಿಲ್ಲ. ಬದಲಿಗೆ ಅವರ ಸಮರ್ಥ ನಾಯಕತ್ವ, ಪಕ್ಷಕ್ಕೆ ಅವರು ನೀಡಿರುವ ಕೊಡುಗೆ ಮತ್ತು ಅವರ ಆಡಳಿತಾತ್ಮಕ ಸಾಧನೆಗಳನ್ನು ಗುರುತಿಸಿ ಹೈಕಮಾಂಡ್ ಅವರಿಗೆ ಈ ಉನ್ನತ ಜವಾಬ್ದಾರಿಯನ್ನು ವಹಿಸಬೇಕು ಎಂದು ಅಭಿಮಾನಿಗಳು ಆಗ್ರಹ ಮಾಡಿದರು.
“ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳೂ ಮೆಚ್ಚಿದ ನಾಯಕ!
ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ INTUC ರಾಜ್ಯ ಉಪಾಧ್ಯಕ್ಷ ನಾಗರಾಜು ಅವರು ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.: ಮೂರು ಬಾರಿ ಶಾಸಕರಾಗಿ, ಸಚಿವರಾಗಿ ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ (IT-BT) ಇಲಾಖೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಅವರ ದಕ್ಷತೆಯನ್ನು ಕೇವಲ ಕಾಂಗ್ರೆಸ್ ಮಾತ್ರವಲ್ಲದೆ, ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಾಯಕರೂ ಕೂಡ ಮೆಚ್ಚಿಕೊಂಡಿದ್ದಾರೆ. ಇಂತಹ ಜನಪ್ರಿಯ ನಾಯಕನಿಗೆ ಡಿಸಿಎಂ ಹುದ್ದೆ ನೀಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಕೆಪಿಸಿಸಿ ಪರಿಶಿಷ್ಟ ಜಾತಿ ವಕ್ತಾರರಾದ ಬಂಡಿಪಾಳ್ಯ ವಿಜಯ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಾದರೆ ದಲಿತರು, ಹಿಂದುಳಿದ ವರ್ಗಗಳು ಸೇರಿದಂತೆ ಸರ್ವ ಸಮುದಾಯಗಳ ಒಕ್ಕೂಟವನ್ನು ಗಟ್ಟಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಿಯಾಂಕ್ ಖರ್ಗೆ ಅವರಂತಹ ಯುವ ಮತ್ತು ಸಮರ್ಥ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡುವುದು ಇಂದಿನ ಅಗತ್ಯವಾಗಿದೆ” ಎಂದರು.
ಮುಂದುವರಿದು ಮಾತನಾಡಿದ ಅವರು, “ನಾವು ಅವರ ತಂದೆಯವರ (ಮಲ್ಲಿಕಾರ್ಜುನ ಖರ್ಗೆ) ಹೆಸರಿನಲ್ಲಾಗಲಿ ಅಥವಾ ಸಮುದಾಯದ ಹೆಸರಿನಲ್ಲಾಗಲಿ ಉನ್ನತ ಹುದ್ದೆ ಕೇಳುತ್ತಿಲ್ಲ. ಅವರು ಯಾರದ್ದೋ ಹಿಂದೆ ಹೋಗಿ ನಾಯಕರಾದವರಲ್ಲ. ತಮ್ಮ ಸ್ವಂತ ಪರಿಶ್ರಮ ಮತ್ತು ಹೋರಾಟದಿಂದ ರಾಜಕೀಯವಾಗಿ ಬೆಳೆದಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿ ಡಿಸಿಎಂ ಹುದ್ದೆ ನೀಡಲೇಬೇಕು” ಎಂದು ಹೈಕಮಾಂಡ್‌ಗೆ ಕಟ್ಟುನಿಟ್ಟಿನ ಆಗ್ರಹ ಮಾಡಿದರು.
ಈಗಾಗಲೇ ದೆಹಲಿಯಲ್ಲಿ ಸಚಿವರ ಪಟ್ಟಿ ಫೈನಲ್ ಮಾಡಲು ಸಭೆಗಳು ನಡೆಯುತ್ತಿದ್ದು, ಇದರ ನಡುವೆ ಬೆಂಗಳೂರಿನಲ್ಲಿ ಕೇಳಿಬಂದಿರುವ ಪ್ರಿಯಾಂಕ್ ಖರ್ಗೆ ಅವರ ಡಿಸಿಎಂ ಬೇಡಿಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
#PriyankKharge #DCMDemand #PriyankKhargeForDCM #CongressPolitics #BengaluruProtest #TownHall #MallikarjunKharge #KPCC #DalitOrganisations #KarnatakaPolitics #FreedomTVKannada #BreakingNews




