Freedom TV

ಶಾಸಕ ಬಿ.ಕೆ. ಸಂಗಮೇಶ್ ಮಂತ್ರಿ ಸ್ಥಾನಕ್ಕೆ ಪಟ್ಟು!

BK sangamesh demands for Ministership

ತುಮಕೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಕೌಂಟ್‌ಡೌನ್ ಶುರುವಾಗಿದೆ. ತುಮಕೂರು ಜಿಲ್ಲೆಯ ನೊಣವಿನಕೆರೆಯ ಪ್ರಸಿದ್ಧ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್, ರಾಜ್ಯ ರಾಜಕೀಯದ ಮುಂದಿನ ಹಂತ ಹಾಗೂ ಸಚಿವ ಸಂಪುಟ ಕಸರತ್ತಿನ ಬಗ್ಗೆ ಅತ್ಯಂತ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಗುರುಗಳು ಕೊಟ್ಟ ಮುಹೂರ್ತಕ್ಕೆ ಡಿಕೆಶಿ ಪ್ರಮಾಣವಚನ!


ಭದ್ರಾವತಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಶ್ರೀಗಳ ಆಶೀರ್ವಾದ ಪಡೆಯಲು ಮಠಕ್ಕೆ ಆಗಮಿಸಿದ್ದ ಬಿ.ಕೆ. ಸಂಗಮೇಶ್ ಮಾಧ್ಯಮಗಳೊಂದಿಗೆ ಮಾತನಾಡಿದರು. “ನಾನೇ ಸ್ವತಃ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹೈಕಮಾಂಡ್ ಎರಡೂವರೆ ವರ್ಷದ ಅವಧಿಗೆ ಮಾತು ಕೊಟ್ಟಿತ್ತು, ಅದರಂತೆ ಸಿದ್ದರಾಮಯ್ಯನವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಅವರು ಕಾಡಸಿದ್ದೇಶ್ವರ ಮಠದ ಗುರುಗಳ ಬಳಿಗೆ ಬರಲಿದ್ದಾರೆ. ಗುರುಗಳು ಯಾವ ಶುಭ ದಿನಾಂಕವನ್ನು ನಿಗದಿಪಡಿಸಿಕೊಡುತ್ತಾರೋ, ಅದೇ ದಿನದಂದೇ ಡಿಕೆಶಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ” ಎಂದು ಸ್ಫೋಟಕ ಸಂಗತಿಯನ್ನು ಬಹಿರಂಗಪಡಿಸಿದರು.

CLP ಸಭೆಯಲ್ಲಿ ಸಹಿ ಸಂಗ್ರಹವಿಲ್ಲ!
ಶಾಸಕರ ಬೆಂಬಲದ ಕುರಿತು ಮಾತನಾಡಿದ ಬಿ.ಕೆ. ಸಂಗಮೇಶ್, “ಕೆಲವು ಶಾಸಕರು ಸಿದ್ದರಾಮಯ್ಯನವರ ಪರವಾಗಿ ಅಭಿಪ್ರಾಯ ಪಟ್ಟಿದ್ದು ನಿಜ. ಆದರೆ, ಸಿದ್ದರಾಮಯ್ಯನವರೇ ನಾನೇ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿರುವುದರಿಂದ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಯಾವುದೇ ಸಹಿ ಸಂಗ್ರಹ ಅಥವಾ ಗೊಂದಲ ಮೂಡುವ ಕೆಲಸ ನಡೆಯುವುದಿಲ್ಲ. ಇಂದು ಸಂಜೆ ಅಥವಾ ನಾಳೆ ಅಧಿಕೃತವಾಗಿ ಸಿಎಲ್‌ಪಿ ಸಭೆ ಕರೆಯಲಿದ್ದಾರೆ, ಆದರೆ ನಮಗೆ ಇನ್ನೂ ಯಾವುದೇ ಅಧಿಕೃತ ಕರೆ ಬಂದಿಲ್ಲ” ಎಂದರು.

ನಾನೇ ಸೀನಿಯರ್ – ನನಗೆ ಮಂತ್ರಿಗಿರಿ ಬೇಕು!
ಇದೇ ವೇಳೆ ಡಿಕೆಶಿ ಹೊಸ ಸಚಿವ ಸಂಪುಟದಲ್ಲಿ ತಮಗೂ ಸ್ಥಾನ ಸಿಗಬೇಕೆಂಬ ಆಸೆಯನ್ನು ಬಿ.ಕೆ. ಸಂಗಮೇಶ್ ಮುಕ್ತವಾಗಿ ಹೊರಹಾಕಿದ್ದಾರೆ. “ಶಿವಮೊಗ್ಗ ಜಿಲ್ಲೆಯಲ್ಲೇ ನಾನೇ ಅತ್ಯಂತ ಸೀನಿಯರ್ ನಾಯಕ. ಈಗಾಗಲೇ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸರ್ಕಾರದ ಮೊದಲ ಅವಧಿಯಲ್ಲೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಕಾರಣಾಂತರಗಳಿಂದ ತಪ್ಪಿಹೋಯಿತು. ನಾನು ಸದಾ ಪಕ್ಷನಿಷ್ಠೆಯಿಂದ ಇದ್ದೇನೆ, ಈ ಬಾರಿ ನನಗೆ ಮಂತ್ರಿ ಭಾಗ್ಯ ಸಿಗುತ್ತೆ ಅನ್ನೋ ಸಂಪೂರ್ಣ ವಿಶ್ವಾಸವಿದೆ. ಖಾತೆ ಯಾವುದಾದರೂ ನೀಡಲಿ, ಮೊದಲು ಮಂತ್ರಿಗಿರಿ ಕೊಡಲಿ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ” ಎಂದು ಹೈಕಮಾಂಡ್‌ಗೆ ನೇರ ಬೇಡಿಕೆ ಇಟ್ಟಿದ್ದಾರೆ.

ಡಿಕೆಶಿ 40 ವರ್ಷಗಳ ರಾಜಕೀಯ ಅನುಭವಿ!
ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ಶ್ಲಾಘಿಸಿದ ಸಂಗಮೇಶ್, “ಡಿಕೆಶಿ ಅವರಿಗೆ 40 ವರ್ಷಗಳ ಸುದೀರ್ಘ ರಾಜಕೀಯ ಅನುಭವವಿದೆ. ಈಗಾಗಲೇ 9 ಬಾರಿ ಮಂತ್ರಿಯಾಗಿ ಕೆಲಸ ಮಾಡಿದ ದಕ್ಷತೆ ಅವರಿಗಿದೆ. ತಮ್ಮ ಅಪಾರ ಅನುಭವದ ಆಧಾರದ ಮೇಲೆ ರಾಜ್ಯದ ಜನತೆಗೆ ಹತ್ತು ಹಲವಾರು ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ ರಾಜಕಾರಣ ಇಲ್ಲ, ನಾವೆಲ್ಲರೂ ಒಂದೇ” ಎಂದು ಹೇಳುವ ಮೂಲಕ ಹೊಸ ಸರ್ಕಾರದ ಆಡಳಿತಕ್ಕೆ ಶುಭ ಹಾರೈಸಿದ್ದಾರೆ. ಶಾಸಕ ಬಿ.ಕೆ. ಸಂಗಮೇಶ್ ಅವರ ಈ ಹೇಳಿಕೆಗಳು ಡಿಕೆಶಿ ಅವರ ಪ್ರಮಾಣವಚನದ ಮುಹೂರ್ತ ಹಾಗೂ ಶಿವಮೊಗ್ಗ ಜಿಲ್ಲೆಯ ಸಚಿವ ಸ್ಥಾನದ ರೇಸ್ ಅನ್ನು ಮತ್ತಷ್ಟು ರೋಚಕಗೊಳಿಸಿದೆ.

#FreedomTV #BKSangamesh #NonavinakereMatha #DKShivakumar #NextCMDKS #SiddaramaiahResigns #KarnatakaPolitics #CabinetLobby #BhadravathiMLA #ShivamoggaPolitics #CLPMeeting #OathTakingCeremony #CongressHighCommand #BreakingNewsKarnataka #ಕನ್ನಡಸುದ್ದಿ

Comments (0)

Your email address will not be published. Required fields are marked *

Back to top button