KOLARಕ್ರೈಂ ಸ್ಟೋರಿ

‘ಖಾಕಿ ಬಿಚ್ಚಿ ಬಾ ನೋಡ್ಕೋತಿನಿ’ ಎಂದ ರೌಡಿ ಕಂಬಿ ಹಿಂದೆ!

Rowdysheeter Stanly arrest in KGF

ಕೋಲಾರ (ಕೆಜಿಎಫ್): “ನೀನು ಒಬ್ಬನಿಗೆ ಹುಟ್ಟಿದ್ರೆ ನಿನ್ನ ಪೊಲೀಸ್ ಡ್ರೆಸ್ ಬಿಚ್ಚಿ ನನ್ನ ಹತ್ರ ಬಾ, ನಾನೇನು ಅಂತ ತೋರಿಸ್ತೀನಿ, ಒಂದು ಕೈ ನೋಡ್ಕೊತೀನಿ!” ಎಂದು ಮಗಳ ಮದುವೆ ಸಂಭ್ರಮದಲ್ಲಿದ್ದ ಕುಖ್ಯಾತ ರೌಡಿಶೀಟರ್ ಒಬ್ಬ ಕಾನೂನು ರಕ್ಷಕನಿಗೇ ಹಾಕಿದ ಓಪನ್ ಅವಾಜ್! ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಮದುವೆ ಮನೆಯಲ್ಲೇ ಸಬ್ ಇನ್ಸ್‌ಪೆಕ್ಟರ್‌ಗೆ ಧಮ್ಕಿ ಹಾಕಿದ ರೌಡಿಶೀಟರ್ ಸ್ಟ್ಯಾನ್ಲಿಯನ್ನು ಆಂಡ್ರಸನ್ ಪೇಟೆ ಪೊಲೀಸರು ಸಿನಿಮಾ ಶೈಲಿಯಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.

ಚರ್ಚ್ ಸುತ್ತ ಖಾಕಿ -ಮದುವೆಯಲ್ಲೇ ಅರೆಸ್ಟ್!


ಮೇ 17 ರಂದು ಕೆಜಿಎಫ್ ನಗರದ ಸೆಂಟ್ ಜೋಸೆಫ್ ಚರ್ಚ್‌ನಲ್ಲಿ ರೌಡಿಶೀಟರ್ ಸ್ಟ್ಯಾನ್ಲಿ ಮಗಳ ಮದುವೆ ಕಾರ್ಯಕ್ರಮ ಜರುಗುತ್ತಿತ್ತು. ಈಗಾಗಲೇ ಕೆಜಿಎಫ್ ನಗರದಿಂದ ಕಲಬುರಗಿ ಜಿಲ್ಲೆಗೆ ಗಡಿಪಾರು ಆಗಿದ್ದರೂ ಕೂಡ ಈತ ನಿಯಮ ಮೀರಿ ಮಗಳ ಮದುವೆಗಾಗಿ ನಗರಕ್ಕೆ ಬಂದಿದ್ದ. ಇದೇ ವೇಳೆ ಬೆದರಿಕೆ ಕರೆ ಮಾಡಿದ ಆರೋಪದಡಿ ಈತನನ್ನು ಬಂಧಿಸಲು ಆಂಡ್ರಸನ್ ಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಸಿಬ್ಬಂದಿಯೊಂದಿಗೆ ಚರ್ಚ್‌ಗೆ ಆಗಮಿಸಿದ್ದರು.ಪೊಲೀಸರು ಚರ್ಚ್ ಒಳಗೆ ಬರುತ್ತಿದ್ದಂತೆ ರೌದ್ರಾವತಾರ ತಾಳಿದ ರೌಡಿಶೀಟರ್ ಸ್ಟ್ಯಾನ್ಲಿ, ಇಡೀ ಮದುವೆ ಮಂದಿಯ ಎದುರೇ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರಿಗೆ ತೀವ್ರ ಏಕವಚನದಲ್ಲಿ ನಿಂದಿಸಿ, ಆವಾಜ್ ಹಾಕಿದ್ದಾನೆ.
“ಪೊಲೀಸ್ ಯೂನಿಫಾರ್ಮ್ ಕಳಚಿ ನನ್ನ ಮುಂದೆ ಬರ್ತೀಯಾ? ಧೈರ್ಯವಿದ್ದರೆ ಡ್ರೆಸ್ ಬಿಚ್ಚಿ ಬಾ, ನಾನೇನು ಅಂತ ನಿನಗೆ ತೋರಿಸ್ತೀನಿ. ನಿನ್ನೊಂದಿಗೆ ಒಂದು ಕೈ ನೋಡ್ಕೊತೀನಿ” ಎಂದು ಇಡೀ ಪೊಲೀಸ್ ವ್ಯವಸ್ಥೆಗೆ ಸವಾಲು ಹಾಕಿದ್ದಾನೆ. ರೌಡಿಯ ಈ ಸೊಕ್ಕಿನ ಮಾತಿಗೆ ಧೃತಿಗೆಡದ ಪೊಲೀಸರು, ತಕ್ಷಣವೇ ಚರ್ಚ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ, ಮಗಳ ಮದುವೆ ಆವರಣದಲ್ಲೇ ಸ್ಟ್ಯಾನ್ಲಿಯನ್ನು ಕಾಲರ್ ಹಿಡಿದು ಹೊರಗೆ ಎಳೆದೊಯ್ದು ಜೀಪ್ ಹತ್ತಿಸಿದ್ದಾರೆ.

ಪೊಲೀಸರ ದೌರ್ಜನ್ಯ ಎಂದು ಸಂಬಂಧಿಕರು- ರೌಡಿ ವಿರುದ್ಧ 2 ಹೊಸ ಕೇಸ್!
ಮಗಳ ಮದುವೆ ನಡೆಯುತ್ತಿದ್ದ ಮಂಗಳ ಕಾರ್ಯದ ವೇಳೆ ಪೊಲೀಸರು ಚರ್ಚ್ ಒಳಗೆ ನುಗ್ಗಿ ಸ್ಟ್ಯಾನ್ಲಿ ಹಾಗೂ ಅವರ ಕುಟುಂಬದವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಕರ್ತವ್ಯ ನಿರತ ಪೊಲೀಸರಿಗೆ ಬಹಿರಂಗವಾಗಿ ಜೀವಬೆದರಿಕೆ ಒಡ್ಡಿದ ಮತ್ತು ಹಲ್ಲೆಗೆ ಯತ್ನಿಸಿದ ಆರೋಪದ ಅಡಿಯಲ್ಲಿ ಆಂಡ್ರಸನ್ ಪೇಟೆ ಪೊಲೀಸರು ರೌಡಿಶೀಟರ್ ಸ್ಟ್ಯಾನ್ಲಿ ವಿರುದ್ಧ ಮತ್ತೆ 2 ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜೈಲಿಗಟ್ಟಿದೆ.

ತಾನು ರೌಡಿ, ತನ್ನ ಮಗಳ ಮದುವೆ ಕಾರಣ ಯಾರೂ ನನ್ನ ಟಚ್ ಮಾಡೋಲ್ಲ ಎಂಬ ಭ್ರಮೆಯಲ್ಲಿದ್ದ ಈ ರೌಡಿಶೀಟರ್ ಗೆ ಕೆಜಿಎಫ್ ಪೊಲೀಸರು ಸರಿಯಾಗಿ ಬುದ್ಧಿಕಲಿಸಿದ್ದಾರೆ. ಯೂನಿಫಾರ್ಮ್ ಬಿಚ್ಚಿ ಬಾ ಎಂದು ಸವಾಲು ಹಾಕಿದವನಿಗೆ, ಅದೇ ಯೂನಿಫಾರ್ಮ್‌ನ ತಾಕತ್ತೇನು ಎಂಬುದನ್ನು ಪೊಲೀಸರು ಜೈಲು ಕಂಬಿ ಎಣಿಸುವಂತೆ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ.

#FreedomTV #KGFNews #KolarCrime #RowdySheeterStanley #PoliceVsRowdy #Andersonpet #ArrestInWedding #SubInspectorManjunath #KGFPolice #BreakingNews #KarnatakaCrime #Rowdyism #StJosephChurch

Comments (0)

Your email address will not be published. Required fields are marked *

Back to top button