ಉಂಡ ಮನೆಗೆ ಕನ್ನ; 89 ಲಕ್ಷ ಚಿನ್ನ ಕದ್ದವರ ಬಂಧನ!
Gold biscuit thieves caugt by Halsur gate police

ಬೆಂಗಳೂರು: ನಂಬಿ ಕೆಟ್ಟವರಿಲ್ಲವೋ, ನಂಬಿಕೆಯೇ ಜೀವನದ ತತ್ವದಡಿ ಬೆಂಗಳೂರಿನಲ್ಲಿ ಕೆಲಸ ಕೊಟ್ಟು ಸಾಕಿ ಸಲಹಿದ ಮಾಲೀಕನಿಗೇ ಒಂಬತ್ತು ಜನ ನೌಕರರು ಕೋಟ್ಯಂತರ ರೂಪಾಯಿ ನಾಮ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ತಾವು ಕೆಲಸ ಮಾಡುತ್ತಿದ್ದ ಖಾಸಗಿ ಚಿನ್ನದ ಕಂಪನಿಯಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ದೋಚಿ ರೈಲಿನಲ್ಲಿ ಪರಾರಿಯಾಗಿದ್ದ 9 ಜನ ಖದೀಮ ಕಾರ್ಮಿಕರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿ ಸಿನಿಮೀಯ ಶೈಲಿಯಲ್ಲಿ ಹೆಡೆಮುರಿ ಕಟ್ಟಿದ್ದಾರೆ.

ಚಿನ್ನದ ಅಂಗಡಿ-ಮಿಡ್ ನೈಟ್ ಸ್ಕೆಚ್!
ಬೆಂಗಳೂರಿನ ಭಾರಿ ವ್ಯಾಪಾರ ವಹಿವಾಟಿನ ಕೇಂದ್ರವಾದ ನಗರ್ತಪೇಟೆ ಮುಖ್ಯ ರಸ್ತೆಯಲ್ಲಿರುವ ಖಾಸಗಿ ಚಿನ್ನದ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದೆ. ಬಂಧಿತ 9 ಜನ ಕಾರ್ಮಿಕರು ಕಳೆದ ಆರು ತಿಂಗಳಿನಿಂದ ಇದೇ ಕಂಪನಿಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು. ಆರೋಪಿಗಳೆಲ್ಲರೂ ಮುಂಚಿತವಾಗಿಯೇ ದೊಡ್ಡ ತಂತ್ರ ಹೆಣೆದಿದ್ದರು ಎನ್ನಲಾಗಿದೆ. ಮೇ 11ರ ರಾತ್ರಿ ಯಾರೂ ಇಲ್ಲದ ವೇಳೆ ಕಂಪನಿಯ ಆವರಣದಲ್ಲಿದ್ದ ಚಿನ್ನದ ಗಟ್ಟಿಗಳು ಮತ್ತು ಸಿದ್ಧವಾಗಿದ್ದ ಆಭರಣಗಳನ್ನು ಲೂಟಿ ಮಾಡಿ, ರಾತ್ರೋರಾತ್ರಿ ಬೆಂಗಳೂರಿನಿಂದ ಪರಾರಿಯಾಗಿದ್ದರು. ಮರುದಿನ ಮೇ 12 ರಂದು ಕಂಪನಿ ಮಾಲೀಕರು ಅಂಗಡಿಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ. ತಕ್ಷಣ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದರು.
ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಬೇಟೆ
ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ತಾಂತ್ರಿಕ ವಿಶ್ಲೇಷಣೆ ಹಾಗೂ ವಿಶ್ವಾಸಾರ್ಹ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿದಾಗ, ಆರೋಪಿಗಳೆಲ್ಲರೂ ಬೆಂಗಳೂರಿನಿಂದ ರೈಲು ಹತ್ತಿ ವಿಶಾಖಪಟ್ಟಣಂ ಮಾರ್ಗವಾಗಿ ತಮ್ಮ ತಾಯ್ನಾಡು ಪಶ್ಚಿಮ ಬಂಗಾಳಕ್ಕೆ ಓಡಿಹೋಗುತ್ತಿರುವುದು ಧೃಡವಾಯಿತು.ತಕ್ಷಣವೇ ಅಲರ್ಟ್ ಆದ ಬೆಂಗಳೂರು ಪೊಲೀಸರು ಮೇ 13 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದ ರೈಲ್ವೆ ನಿಲ್ದಾಣದ ಬಳಿ ದಾಳಿ ನಡೆಸಿ, ಒಂಬತ್ತೂ ಜನ ಆರೋಪಿಗಳನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಗಳ ಬ್ಯಾಗ್ ಪರಿಶೀಲಿಸಿದಾಗ ಕದ್ದಿದ್ದ ಒಟ್ಟು 618 ಗ್ರಾಂ ತೂಕದ ಚಿನ್ನದ ಗಟ್ಟಿಗಳು ಹಾಗೂ ಆಭರಣಗಳು ಪತ್ತೆಯಾಗಿದ್ದು, ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 89 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೊಲೀಸರು ಇಡೀ ಮಾಲನ್ನು ಜಪ್ತಿ ಮಾಡಿದ್ದಾರೆ.
ಸಂಬಳ ಕೊಟ್ಟಿಲ್ಲ- ನಾವು ಚಿನ್ನ ಬಿಟ್ಟಿಲ್ಲ ಎಂದ ಕಳ್ಳರು!
ಬಂಧಿತರನ್ನು ಬೆಂಗಳೂರಿಗೆ ಕರೆತಂದು ಕೋರ್ಟ್ ಮುಂದೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಸದ್ಯ ಪೊಲೀಸರ ತೀವ್ರ ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಕಳ್ಳತನಕ್ಕೆ ವಿಚಿತ್ರ ಕಾರಣ ನೀಡಿದ್ದಾರೆ. “ಕಂಪನಿಯವರು ನಮಗೆ ನಿಯಮಿತವಾಗಿ ಸಂಬಳ ನೀಡುತ್ತಿರಲಿಲ್ಲ. ಇದರಿಂದ ನಮಗೆ ಸಿಟ್ಟು ಬಂದಿತ್ತು. ಅದರ ಜೊತೆಗೆ ಅತಿ ಸುಲಭವಾಗಿ ಒಮ್ಮೆಗೆ ದೊಡ್ಡ ಮೊತ್ತದ ಹಣ ಗಳಿಸಿ ಲೈಫ್ ಸೆಟಲ್ ಮಾಡಿಕೊಳ್ಳುವ ದುರಾಶೆಯಿಂದ ನಾವೆಲ್ಲರೂ ಸೇರಿ ಈ ಕಳ್ಳತನ ಮಾಡಿದ್ದೆವು” ಎಂದು ಬಾಯಿಬಿಟ್ಟಿದ್ದಾರೆ.
ಹೊರರಾಜ್ಯದ ಕಾರ್ಮಿಕರನ್ನು ನಂಬಿ ಕೋಟ್ಯಂತರ ರೂಪಾಯಿ ವ್ಯವಹಾರದ ಜವಾಬ್ದಾರಿ ಒಪ್ಪಿಸುವ ಮುನ್ನ ಮಾಲೀಕರು ಹತ್ತು ಬಾರಿ ಯೋಚಿಸಬೇಕು. ಅವರ ಪೂರ್ವಾಪರ ಇತಿಹಾಸ ಹಾಗೂ ಪೊಲೀಸ್ ಪರಿಶೀಲನೆ ಮಾಡಿಸುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಆಂಧ್ರದಲ್ಲಿ ಬಂಧಿಸಿದ ಹಲಸೂರು ಗೇಟ್ ಪೊಲೀಸರ ಕಾರ್ಯ ಶ್ಲಾಘನೀಯ.
#FreedomTV #BengaluruCrime #HalasuruGatePolice #GoldTheft #Nagarathpete #GoldRobbery #WestBengalWorkers #Visakhapatnam #BengaluruPolice #BreakingNews #CrimeUpdates #KarnatakaNews #GoldSeized




