bengaluruರಾಜಕೀಯ

ಮೇ 30ಕ್ಕೆ ಕೇಂದ್ರದ ವಿರುದ್ಧ ಕೈ ಪಡೆ ‘ಇಂಧನ ಸಮರ’

Congress protest against Central govt on price hike on Fuel

ಬೆಂಗಳೂರು: ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ದರ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಜನಾಂದೋಲನಕ್ಕೆ ಸಜ್ಜಾಗಿದೆ. ಕಳೆದ ಕೇವಲ 11 ದಿನಗಳಲ್ಲಿ ಬರೋಬ್ಬರಿ ನಾಲ್ಕು ಬಾರಿ ಇಂಧನ ದರ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ, ಬರುವ ಮೇ 30ರಂದು ಕರ್ನಾಟಕದಾದ್ಯಂತ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಘಟಕ ಜಂಟಿ ತೀರ್ಮಾನ ಕೈಗೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಬೆಲೆ ಏರಿಕೆಯನ್ನು “ಹಗಲು ದರೋಡೆ” ಎಂದು ಬಣ್ಣಿಸಿ ಕೇಂದ್ರದ ವಿರುದ್ಧ ಹರಿಹಾಯ್ದರು.

ಇಂಧನ ಬೆಲೆ ಏರಿಕೆ ಕ್ಷಮಿಸಲಾರದ ಅಪರಾಧ!

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಜಾಗತಿಕ ಮಾರುಕಟ್ಟೆಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿ ಕೇಂದ್ರದ ನೀತಿಯನ್ನು ತರಾಟೆಗೆ ತೆಗೆದುಕೊಂಡರು. “ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಪ್ರತಿ ಬ್ಯಾರೆಲ್‌ಗೆ 98.6 ಡಾಲರ್‌ಗೆ ಇಳಿದಿದೆ. ನಿಯಮದ ಪ್ರಕಾರ ಇದರ ಲಾಭ ಸಾಮಾನ್ಯ ಜನರಿಗೆ ಸಿಗಬೇಕಿತ್ತು. ಆದರೆ ಭಾರತದಲ್ಲಿ ಕಳೆದ 11 ದಿನಗಳಲ್ಲಿ 4 ಬಾರಿ ತೈಲ ದರ ಹೆಚ್ಚಿಸಲಾಗಿದೆ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ, ಇದು ಕ್ಷಮಿಸಲಾಗದ ಅಪರಾಧ.” ಎಂದು ಗುಡುಗಿದರು.

12 ವರ್ಷದಲ್ಲಿ ಬಿಜೆಪಿಯಿಂದ 57 ಲಕ್ಷ ಕೋಟಿ ಲೂಟಿ!

:”2014ರಿಂದ ಇಲ್ಲಿಯವರೆಗೆ ವಿವಿಧ ಎಕ್ಸೈಸ್ ಸುಂಕ ಹಾಗೂ ತೆರಿಗೆಗಳ ಮೂಲಕ ಮೋದಿ ಸರ್ಕಾರ ಸಾರ್ವಜನಿಕರಿಂದ ಬರೊಬ್ಬರಿ 57 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ. ಕೇವಲ ಪೆಟ್ರೋಲ್ ಅಷ್ಟೇ ಅಲ್ಲ; ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್, ಸಿಎನ್‌ಜಿ ಸೇರಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಇದರಿಂದ ಜನ ಬೀದಿಗೆ ಬಿದ್ದಿದ್ದಾರೆ” ಎಂದು ಕಿಡಿಕಾರಿದರು.

“ಇದೇನಾ ಮೋದಿ ಅಚ್ಚೇ ದಿನ್?”- ಸಿಎಂ ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಭರವಸೆಗಳನ್ನು ನೆನಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು. “ಪ್ರಧಾನಿ ಆಗುವ ಮುನ್ನ ದೇಶದಲ್ಲಿ ‘ಅಚ್ಚೇ ದಿನ್’ (ಒಳ್ಳೆಯ ದಿನಗಳು) ತರುತ್ತೇವೆ ಎಂದು ಮೋದಿ ಭರವಸೆ ನೀಡಿದ್ದರು. ಆದರೆ ಈಗ ಜನರಿಗೆ ಸಿಗುತ್ತಿರುವುದು ಬೆಲೆ ಏರಿಕೆಯ ಶಾಕ್ ಮಾತ್ರ. ಕಳೆದ 11 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್‌ಗೆ 7.52 ರೂಪಾಯಿಯಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ದರ ರೂ.110.93 ಹಾಗೂ ಡೀಸೆಲ್ ದರ ರೂ.98.89ಕ್ಕೆ ತಲುಪಿದೆ. ಶೀಘ್ರದಲ್ಲೇ ಡೀಸೆಲ್ ಸೆಂಚುರಿ ಬಾರಿಸಲಿದ್ದು, ಇದರಿಂದ ರೈತರು, ಮಹಿಳೆಯರು, ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ.”

“ನಮ್ಮ ಗ್ಯಾರಂಟಿ ಇಲ್ಲದಿದ್ರೆ ಜನ ಸಾಯ್ತಿದ್ರು” ಡಿಸಿಎಂ ಡಿ.ಕೆ.ಶಿವಕುಮಾರ್
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ನಡುವೆಯೂ ರಾಜ್ಯದ ಗ್ಯಾರಂಟಿ ಯೋಜನೆಗಳು ಜನರನ್ನು ರಕ್ಷಿಸುತ್ತಿವೆ ಎಂದರು. “ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ನಾವು ಜನರಿಗೆ ಆರ್ಥಿಕ ನೆರವು ನೀಡಿ ಅವರ ಕೈ ಹಿಡಿಯುತ್ತಿದ್ದೇವೆ. ಒಂದು ವೇಳೆ ನಮ್ಮ ಗ್ಯಾರಂಟಿಗಳು ಇಲ್ಲದೇ ಹೋಗಿದ್ದರೆ, ಕೇಂದ್ರದ ಈ ಬೆಲೆ ಏರಿಕೆಯ ಹೊಡೆತಕ್ಕೆ ಜನರ ಪರಿಸ್ಥಿತಿ ಊಹಿಸಿಕೊಳ್ಳಲೂ ಅಸಾಧ್ಯವಾಗುತ್ತಿತ್ತು.”
ಕೇವಲ 11 ದಿನಗಳಲ್ಲಿ ಲೀಟರ್‌ಗೆ ರೂ.7.52 ಏರಿಕೆಯಾಗಿರುವುದು ಮಧ್ಯಮ ವರ್ಗದ ಬೆನ್ನುಲುಬು ಮುರಿದಂತಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ರಾಜ್ಯಸಭಾ ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್ ಈ ‘ಇಂಧನ ಬೆಲೆ ಏರಿಕೆ’ಯನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ಮೇ 30ರ ಪ್ರತಿಭಟನೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಲಿದೆ.

#FreedomTV #FuelPriceHike #CongressProtest #Siddaramaiah #DKShivakumar #RandeepSurjewala #PetrolPrice #DieselPrice #BengaluruNews #CentralGovernment #NarendraModi #KarnatakaPolitics #BreakingNews #PriceRiseProtest

Comments (0)

Your email address will not be published. Required fields are marked *

Back to top button