MYSORE

ರಾಜ್ಯಸಭೆಗೆ ರೆಡಿ, ಚುನಾವಣೆಯಾದ್ರೆ ಕಾಂಗ್ರೆಸ್‌ 50 ಸೀಟು ಗೆಲ್ಲಲ್ಲ -ಸದಾನಂದಗೌಡ

DV sadananda gowda ready for Rajyasabha election

ಮೈಸೂರು: ರಾಜ್ಯದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು. “ನಾನು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿದ್ದರೂ, ರಾಜ್ಯಸಭೆಗೆ ಸ್ಪರ್ಧಿಸಲು ತಯಾರಾಗಿದ್ದು, ಹೈಕಮಾಂಡ್‌ಗೆ ನನ್ನ ಇಂಗಿತವನ್ನು ತಿಳಿಸಿದ್ದೇನೆ” ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿ ಬಿಜೆಪಿ ಪಾಳಯಕ್ಕೆ ಶಾಕ್ ನೀಡಿದರು.

ಲೋಕಸಭಾ ಚುನಾವಣೆಯ ವೇಳೆ ಸಕ್ರಿಯ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ಡಿ.ವಿ. ಸದಾನಂದಗೌಡ, ಈಗ ಸಂಸತ್ತಿನ ಮೇಲ್ಮನೆ ಪ್ರವೇಶಿಸಲು ಆಸೆ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದನ್ನು ಶಿಸ್ತಿನ ಸಿಪಾಯಿಯಾಗಿ ಗೌರವಿಸಿ ಪಾಲಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ಗೆ 50 ಸ್ಥಾನ ಬರೋಲ್ಲ- SIR ವಿರೋಧಕ್ಕೆ ಆಕ್ರೋಶ


ಕರ್ನಾಟಕದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಆಡಳಿತಾರೂಢ ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಡಿವಿಎಸ್ ತೀವ್ರ ವಾಗ್ದಾಳಿ ನಡೆಸಿದರು. “ರಾಜ್ಯ ಸರ್ಕಾರ ತನ್ನ ಮೂರು ವರ್ಷಗಳ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಜನರ ಗಮನ ಬೇರೆಡೆ ಸೆಳೆಯಲು ಹರಸಾಹಸ ಪಡುತ್ತಿದೆ. ಇಡೀ ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಒಂದು ವೇಳೆ ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ 50 ಸ್ಥಾನಗಳನ್ನು ಗೆಲ್ಲುವುದೂ ಕಷ್ಟ. ಸೋಲಿನ ಭಯದಿಂದಲೇ ಸರ್ಕಾರ ಪ್ರತಿಯೊಂದು ಪಾರದರ್ಶಕ ವಿಷಯವನ್ನೂ ವಿರೋಧಿಸುತ್ತಿದೆ.”

ಇಂಧನ ದರ ಏರಿಕೆ ಸಮರ್ಥನೆ-ರಸಗೊಬ್ಬರ ದಂಧೆ!
: ಇತ್ತೀಚಿನ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡ ಮಾಜಿ ಸಿಎಂ, “ಇದು ಸಂಪೂರ್ಣವಾಗಿ ಜಾಗತಿಕ ಆರ್ಥಿಕ ಪರಿಸ್ಥಿತಿಯ ಪರಿಣಾಮವಾಗಿದೆ. ವಿಶ್ವದ ಹಲವು ಪ್ರಮುಖ ದೇಶಗಳಿಗೆ ಹೋಲಿಕೆ ಮಾಡಿ ನೋಡಿದರೆ ಭಾರತದಲ್ಲಿ ಇಂಧನ ದರ ಏರಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ” ಎಂದರು. “ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಸಬ್ಸಿಡಿ ನೀಡಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಪೂರೈಕೆ ಮಾಡುತ್ತಿದೆ. ಆದರೆ, ಕೆಲವು ದುರಾಸೆಯ ವ್ಯಾಪಾರಿಗಳು ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಮಾರುಕಟ್ಟೆಯಲ್ಲಿ ಕೃತಕ ಕೊರತೆ ಸೃಷ್ಟಿಸುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ಬಿ.ವೈ.ವಿಜಯೇಂದ್ರ ಅವರೇ ನಮ್ಮ ನಾಯಕ!
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಎದ್ದಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ವಿಚಾರ ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ವ್ಯಾಪ್ತಿಗೆ ಸೇರಿದ್ದು, ಇದರ ಬಗ್ಗೆ ನಾನು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಪ್ರಸ್ತುತ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷ ಸಂಘಟನೆಯನ್ನು ಬಲಪಡಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಯಕತ್ವ ಬದಲಾವಣೆ ಪ್ರಶ್ನೆ ಬರುವುದಿಲ್ಲ. ಅವರ ಅವಧಿಗೂ ಇನ್ನೂ ಒಂದು ವರ್ಷ ಬಾಕಿಯಿದೆ. ಒಂದು ವೇಳೆ ಬದಲಾವಣೆ ಅಗತ್ಯವಿದ್ದರೆ ಹೈಕಮಾಂಡ್ ಆಂತರಿಕವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ” ಎಂದು ತಿಳಿಸಿದರು.

#FreedomTV #DVSadanandaGowda #RajyaSabhaElections #Mysuru #BJPNews #BYVijayendra #KarnatakaPolitics #CongressVsBJP #FuelPriceHike #SIRControversy #BreakingNews #KarnatakaNews #FertilizerScarcity

Comments (0)

Your email address will not be published. Required fields are marked *

Back to top button