MYSOREಮನರಂಜನೆ

ಮಾಜಿ ಸಿಎಂ ಜಯಲಲಿತಾ ಅಣ್ಣ ಎನ್.ಜೆ. ವಾಸುದೇವನ್ ನಿಧನ!

Ex CM Jayalalitha brother died in bannur

ಮೈಸೂರು: ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಹೋದರ (ತಂದೆಯ ಕಡೆಯಿಂದ ಅಣ್ಣ) ಎನ್.ಜೆ. ವಾಸುದೇವನ್ (92 ವರ್ಷ) ಅವರು ಇಂದು ಮುಂಜಾನೆ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಸಮೀಪವಿರುವ ಚಾಮನಹಳ್ಳಿಯಲ್ಲಿರುವ ತಮ್ಮ ಸಾಕುಮಗಳ ಮನೆಯಲ್ಲಿ ವಾಸುದೇವನ್ ಅವರು ಕೊನೆಯುಸಿರೆಳೆದಿದ್ದಾರೆ.


ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ರಂಗರಾಜಪುರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಯಲಲಿತಾ ಮತ್ತು ವಾಸುದೇವನ್ ಸಂಬಂಧವೇನು?


ಜೆ. ಜಯಲಲಿತಾ ಅವರ ತಂದೆ ಜಯರಾಮ್ ಅವರ ಮೊದಲ ಪತ್ನಿ ಎಲ್.ಕೆ. ಜಯಮ್ಮಾಳ್ ದಂಪತಿಯ ಏಕೈಕ ಪುತ್ರನೇ ಈ ಎನ್.ಜೆ. ವಾಸುದೇವನ್. ಜಯರಾಮ್ ಅವರ ಎರಡನೇ ಪತ್ನಿ ವೇದವಲ್ಲಿ (ಚಿತ್ರರಂಗದಲ್ಲಿ ಸಂಧ್ಯಾ). ಈ ಎರಡನೇ ಪತ್ನಿಯ ಮಗಳೇ ತಮಿಳುನಾಡಿನ ‘ಅಮ್ಮ’ ಎಂದೇ ಪ್ರಸಿದ್ಧರಾಗಿದ್ದ, ಮುಖ್ಯಮಂತ್ರಿಯಾಗಿದ್ದ ಜಯಲಲಿತಾ. ಈ ಮೂಲಕ ವಾಸುದೇವನ್ ಅವರು ಜಯಲಲಿತಾ ಅವರಿಗೆ ತಂದೆಯ ಕಡೆಯಿಂದ ಅಣ್ಣನಾಗಬೇಕಿತ್ತು.

ಆಸ್ತಿಗಾಗಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಅಣ್ಣ
ಜಯಲಲಿತಾ ಅವರು ಬದುಕಿದ್ದಾಗ ವಾಸುದೇವನ್ ಅವರೊಂದಿಗೆ ಯಾವುದೇ ಸಾರ್ವಜನಿಕ ಅಥವಾ ಕೌಟುಂಬಿಕ ನಿಕಟ ಸಂಬಂಧವನ್ನು ಹೊಂದಿರಲಿಲ್ಲ. ಬನ್ನೂರಿನ ಚಾಮನಹಳ್ಳಿಯ ತೋಟದ ಮನೆಯಲ್ಲೇ ವಾಸುದೇವನ್ ಸರಳ ಜೀವನ ನಡೆಸುತ್ತಿದ್ದರು. ಆದರೆ, ಜಯಲಲಿತಾ ಅವರ ನಿಧನದ ನಂತರ ಇಡೀ ದೇಶದ ಗಮನ ಸೆಳೆದಿದ್ದರು.

ತಾವು ಜಯಲಲಿತಾ ಅವರ ನೇರ ರಕ್ತಸಂಬಂಧಿ (ಸಹೋದರ) ಎಂದು ವಾದಿಸಿದ್ದ ವಾಸುದೇವನ್, ಜಯಲಲಿತಾ ಅವರ ನೂರಾರು ಕೋಟಿ ಮೌಲ್ಯದ ಆಸ್ತಿಯಲ್ಲಿ ಶೇಕಡಾ 50 ರಷ್ಟು ಪಾಲನ್ನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಜಯಲಲಿತಾ ಅವರ ಒಡಹುಟ್ಟಿದ ಸಹೋದರನ ಮಕ್ಕಳಾದ ಜೆ. ದೀಪಾ ಮತ್ತು ಜೆ. ದೀಪಕ್ ಅವರನ್ನು ಕಾನೂನುಬದ್ಧ ವಾರಸುದಾರರು ಎಂದು ಘೋಷಿಸಿರುವುದನ್ನು ಪ್ರಶ್ನಿಸಿ ವಾಸುದೇವನ್ ಕಾನೂನು ಹೋರಾಟ ನಡೆಸುತ್ತಿದ್ದರು. ಆದರೆ ಈ ಹೋರಾಟ ಬಾಕಿಯಿರುವಾಗಲೇ ಅವರು ಕಣ್ಣು ಮುಚ್ಚಿದ್ದಾರೆ. ಜಯಲಲಿತಾ ಕುಟುಂಬದ ಹಿರಿಯ ಸದಸ್ಯರಾಗಿದ್ದ ವಾಸುದೇವನ್ ನಿಧನಕ್ಕೆ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

#NJVasudevan #JJayalalitha #JayalalithaBrother #Bannur #MysuruNews #TamilNaduPolitics #JayalalithaAssetCase #BreakingNews #KarnatakaNews #FreedomTVKannada #AmmaJayalalitha #LegalBattle

Comments (0)

Your email address will not be published. Required fields are marked *

Back to top button