
ಮೈಸೂರು : ಆಷಾಢ ಮಾಸದ ಕೊನೆಯ ಶುಕ್ರವಾರದ ಪ್ರಯುಕ್ತ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಇಂದು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ತಾಯಿ ಚಾಮುಂಡೇಶ್ವರಿ ‘ಮಹಾಲಕ್ಷ್ಮಿ’ಯಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.
ಆಷಾಢ ಶುಕ್ರವಾರಗಳಿಗೆ ಮೈಸೂರಿನಲ್ಲಿ ವಿಶೇಷ ಮಹತ್ವವಿದೆ. ಅದರಲ್ಲೂ ಕಡೆಯ ಶುಕ್ರವಾರವಾದ ಇಂದು, ತಾಯಿಯನ್ನು ದರ್ಶನ ಪಡೆಯಲು ಬೆಳ್ಳಂಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.
ಇಂದಿನ ವಿಶೇಷ ದಿನದಂದು ದೇವಸ್ಥಾನದ ಗರ್ಭಗುಡಿಯನ್ನು ಅತ್ಯಂತ ಸುಂದರವಾಗಿ ಸಿಂಗರಿಸಲಾಗಿದೆ. ತಾಯಿ ಚಾಮುಂಡೇಶ್ವರಿಗೆ ಮಹಾಲಕ್ಷ್ಮಿಯ ಅಲಂಕಾರ ಮಾಡಲಾಗಿದ್ದು, ದೇವಿಯ ರೂಪವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಕೇವಲ ವಿಗ್ರಹ ಮಾತ್ರವಲ್ಲದೆ, ಇಡೀ ದೇವಸ್ಥಾನದ ಒಳಾಂಗಣವನ್ನು ಚೆಂಡು ಹೂ, ವಿವಿಧ ಬಣ್ಣದ ಗುಲಾಬಿ ಸೇರಿದಂತೆ ನಾನಾ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ.




