ಅಮೆರಿಕದಿಂದಲೇ ಕ್ಯಾನ್ಸರ್ ಪೀಡಿತ ಅಭಿಮಾನಿಗೆ ಕರೆ ಮಾಡಿದ ರಾಜಾಹುಲಿ!
Actor Yash gives confidence to his fan cancer patient

ಶಿವಮೊಗ್ಗ: ಚಿತ್ರರಂಗದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ರಿಯಲ್ ಹೀರೊ ಎಂಬುದನ್ನು ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ದೃಢಪಡಿಸಿದ್ದಾರೆ.. ಶಿವಮೊಗ್ಗದ ತಮ್ಮ ಅಭಿಮಾನಿ ಸಂಘದ ಅಧ್ಯಕ್ಷರು ಭೀಕರ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವಿಷಯ ತಿಳಿದ ನಟ ಯಶ್, ಶೂಟಿಂಗ್‌ಗಾಗಿ ಅಮೆರಿಕದಲ್ಲಿದ್ದರೂ ಅಲ್ಲಿಂದಲೇ ವಿಡಿಯೋ ಕಾಲ್ ಮಾಡಿ ಅಭಿಮಾನಿ ಹಾಗೂ ಅವರ ಕುಟುಂಬಕ್ಕೆ ಬೆಟ್ಟದಷ್ಟು ಧೈರ್ಯ ತುಂಬಿದ್ದಾರೆ.
ಅಭಿಮಾನಿಗೆ ಕೊನೇ ಹಂತ!
ಶಿವಮೊಗ್ಗದ ಯಶ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸಕ್ರಿಯರಾಗಿದ್ದ ಸುನೀಲ್ ಕುಮಾರ್ ಎನ್. ಅವರು ನಟ ಯಶ್ ಅವರ ಪರಮ ಅಭಿಮಾನಿ. ಆದರೆ ಕೆಲವು ತಿಂಗಳ ಹಿಂದೆ ಸುನೀಲ್ ಅವರಿಗೆ ದುರದೃಷ್ಟವಶಾತ್ ರೆಕ್ಟಲ್ ಕ್ಯಾನ್ಸರ್ (Rectal Cancer) ಕಾಣಿಸಿಕೊಂಡಿತ್ತು. ದುರಂತವೆಂದರೆ, ವೈದ್ಯಕೀಯ ತಪಾಸಣೆ ನಡೆಸಿ ಕಾಯಿಲೆ ಪತ್ತೆಯಾಗುವಷ್ಟರಲ್ಲೇ ಅದು ತೀವ್ರವಾಗಿ ಹರಡಿ 4ನೇ ಹಂತಕ್ಕೆ (Stage 4) ತಲುಪಿದೆ.

ಆರ್ಥಿಕ ಸಂಕಷ್ಟದಲ್ಲಿ ಕುಟುಂಬ – ನೆರವಿಗಾಗಿ ಮನವಿ
ಸುನೀಲ್ ಚಿಕಿತ್ಸೆಗಾಗಿ ಅವರ ಕುಟುಂಬ ಈಗಾಗಲೇ ಭಾರಿ ಪ್ರಮಾಣದ ಹಣವನ್ನು ಖರ್ಚು ಮಾಡಿ ಸುಸ್ತಾಗಿದೆ. ಸದ್ಯ ಮುಂದಿನ ಹೆಚ್ಚಿನ ಚಿಕಿತ್ಸೆಗಾಗಿ ಇನ್ನೂ 19 ಲಕ್ಷ ರೂಪಾಯಿ ಹಣದ ತುರ್ತು ಅಗತ್ಯವಿದೆ. ಕೈಯಲ್ಲಿ ಹಣವಿಲ್ಲದೆ ಕಂಗಾಲಾದ ಕುಟುಂಬದವರು, ಸುನೀಲ್ ಜೀವ ಉಳಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಮೂಲಕ ದಾನಿಗಳಲ್ಲಿ ಸಹಾಯ ಹಸ್ತ ಚಾಚಿದ್ದರು.ಸುನೀಲ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮತ್ತು ಆರ್ಥಿಕ ಸಂಕಷ್ಟದ ವಿಚಾರ ಅಮೆರಿಕದಲ್ಲಿ ಶೂಟಿಂಗ್‌ನಲ್ಲಿದ್ದ ನಟ ಯಶ್ ಅವರ ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ತಡಮಾಡದ ಯಶ್, ಅಲ್ಲಿಂದಲೇ ನೇರವಾಗಿ ಸುನೀಲ್ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ.
“ಈ ರೀತಿ ಆಗಿರುವುದು ತುಂಬಾ ಬೇಸರದ ಸಂಗತಿ. ಯಾವ ಸಮಯದಲ್ಲಿ ಯಾರಿಗೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಭರವಸೆ ಕಳೆದುಕೊಳ್ಳಬಾರದು. ಧೈರ್ಯವಾಗಿರಿ, ಎಲ್ಲವೂ ಒಳ್ಳೆಯದೇ ಆಗುತ್ತದೆ” ಎಂದು ಯಶ್ ಅವರು ಸುನೀಲ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.
ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಕ್ಯಾನ್ಸರ್‌ನಂತಹ ಭೀಕರ ಕಾಯಿಲೆ ಪತ್ತೆಯಾದ ಮೇಲೂ ಸುನೀಲ್ ಧೃತಿಗೆಟ್ಟಿರಲಿಲ್ಲ. ಆಸ್ಪತ್ರೆಯ ಹಾಸಿಗೆಯ ಮೇಲೂ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಮೋಟಿವೇಶನ್ ವಿಡಿಯೋಗಳನ್ನು ನೋಡುತ್ತಲೇ ಧೈರ್ಯ ಮತ್ತು ಸಕಾರಾತ್ಮಕತೆಯನ್ನು ತಂದುಕೊಳ್ಳುತ್ತಿದ್ದರು.
ಪ್ರಸ್ತುತ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್ ಅವರು ಶೀಘ್ರದಲ್ಲೇ ಈ ಮಹಾಮಾರಿಯನ್ನು ಗೆದ್ದು, ಗುಣಮುಖರಾಗಿ ಬರಲಿ ಎಂದು ಫ್ರೀಡಂ ಟಿವಿ ಹಾಗೂ ಕೋಟ್ಯಂತರ ಯಶ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
#RockingStarYash #YashFansAssociation #Shivamogga #Yash #YashFans #RectalCancerAwareness #Humanity #ToxicMovie #SandalwoodNews #YashBoss #FreedomTVKannada #StayStrongSunil




